ನವದೆಹಲಿ : ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ.
ಅಮೆರಿಕ ಡಾಲರ್ ಎದುರು 81.90 ರೂ.ಗೆ ಇಳಿದಿದ್ದು, ಸಾರ್ವಕಾಲಿನ ಕುಸಿತ ದಾಖಲಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮೊದಲ ಬಾರಿಗೆ 82ಕ್ಕಿಂತ ಕೆಳಗಿಳಿದಿದೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ಕಠಿಣ ಹೇಳಿಕೆಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಡಾಲರ್ ಮೌಲ್ಯವರ್ಧನೆಗೊಂಡ ಪರಿಣಾಮ ರೂಪಾಯಿ ಸೇರಿದಂತೆ ಇತರ ರಾಷ್ಟ್ರಗಳ ಕರೆನ್ಸಿಗಳು ತೀವ್ರ ಹೊಡೆತ ಅನುಭವಿಸಿವೆ.
ಅಮೆರಿಕದ ಟ್ರೆಷರ್ ಯೀಲ್ಡ್ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಜೊತೆಗೆ ಆಮದುದಾರರಿಂದ ಡಾಲರ್ಗೆ ಬೇಡಿಕೆ ಹೆಚ್ಚಳವಾಗಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಡಾಲರ್ ಎದುರು ಸತತ ಮೂರನೇ ಬಾರಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಇದೇ ರೀತಿ 2024ರವರೆಗೂ ಯುಎಸ್ ಡಾಲರ್ ಏರಿಕೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.