ರಾಜ್ಯದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ

ಬುಧವಾರ, 8 ಸೆಪ್ಟಂಬರ್ 2021 (09:30 IST)
ಬೆಂಗಳೂರು(ಸೆ.08) : ದೇಶದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಗಾರು ಹೆಚ್ಚಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದೂ ಕೂಡ ಭಾರೀ ಮಳೆಯಾಗಲಿದೆ.  ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು ಇನ್ನು  4 ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆ ಮುಂದುವರೆದಿದ್ದು, ಇನ್ನು 4 ದಿನಗಳ  ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಇದೂ ಸೇರಿ  ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮಂಡ್ಯ,ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಬೆಳಗಾವಿ, ಕೊಪ್ಪಳ, ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.ಇನ್ನು ಬೆಂಗಳುರು ನಗರದಲ್ಲಿ ನಿನ್ನೆಯಂತೆ ಇಂದೂ ಕೂಡ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ.
ಮುಂದಿನ 24 ಗಂಟೆಗಳಲ್ಲಿ, ಕರಾವಳಿ ಕರ್ನಾಟಕದ , ಮಲೆನಾಡು, ಹಾಗೂ ಕರ್ನಾಟಕದ ಕೆಲವು ಪ್ರದೇಶಗಳು ಸೇರಿದಂತೆ  ವಿದರ್ಭ, ಮರಾಠವಾಡ, ಉತ್ತರ ಮಧ್ಯ ಮಹಾರಾಷ್ಟ್ರ, ಮತ್ತು ಗೋವಾ, ದಕ್ಷಿಣ ಗುಜರಾತ್ ಮತ್ತು ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಇನ್ನು ದೇಶದ ವಿವಿಧ ಭಾಗಗಳಲ್ಲಿ ಸಹ ಭಾರೀ ಮಳೆಯಾಗಬಹುದು ಎಂದು ಇಲಾಖೆ ಹೇಳಿದೆ.  ಪಶ್ಚಿಮ ಬಂಗಾಳ, ಒಡಿಶಾದ ಭಾಗ, ದಕ್ಷಿಣ ಮಧ್ಯಪ್ರದೇಶ, ತೆಲಂಗಾಣ, ಸಿಕ್ಕಿಂ, ಅಸ್ಸಾಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆಯಾಗಲಿದೆ.
ಕರ್ನಾಟಕದ ಒಳ ಭಾಗಗಳಲ್ಲಿ ಹಾಗೂ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಳಭಾಗ ಒಡಿಶಾ, ಉಳಿದ ಮಧ್ಯಪ್ರದೇಶ, ದಕ್ಷಿಣ ರಾಜಸ್ಥಾನ, ಪಶ್ಚಿಮ ಹಿಮಾಲಯ, ಪಂಜಾಬ್, ಹರಿಯಾಣ, ದೆಹಲಿ, ಈಶಾನ್ಯ ಭಾರತ, ಕೇರಳ, ಆಂಧ್ರಪ್ರದೇಶಗಳಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
 ಕಳೆದ 24 ಗಂಟೆಗಳಲ್ಲಿ, ಕರಾವಳಿ ಕರ್ನಾಟಕ,  ತೆಲಂಗಾಣ, ವಿದರ್ಭ ಮತ್ತು ಮರಾಠವಾಡದ ಕೆಲವು ಭಾಗಗಳಲ್ಲಿ ಮುಂಗಾರು ಜೋರಾಗಿತ್ತು. ಅಸ್ಸಾಂ, ಪಶ್ಚಿಮ ಬಂಗಾಳ, ಕರಾವಳಿ ಒಡಿಶಾ, ಮತ್ತು ಎನ್ಡಬ್ಲ್ಯೂ ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ