ಶ್ರಾವಣವು ಹಬ್ಬಗಳ ಮಾಸವಾಗಿದೆ. ಮೊನ್ನೆಯಷ್ಟೇ ಮೊದಲ ಹಬ್ಬವಾಗಿ ನಾಗರಪಂಚಮಿಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದ್ದೇವೆ. ಇದೀಗ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಕೂಡ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದೇವೆ.
ವರಮಹಾಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ. ಚಾರುಮತಿ ಎಂಬ ಸ್ತ್ರೀ ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.
ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮಿ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.
ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.
ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.