ತರಗೆಲೆಯಂತೆ ಉದುರಿದ ಕಟ್ಟಡಗಳು. ಒಂದೆಡೆ ಅವಶೇಷಗಳಡಿ ಸಿಲುಕಿರುವ ಸಾವಿರಾರು ಜೀವಗಳ ಚೀತ್ಕಾರ. ಮತ್ತೊಂದೆಡೆ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಜನ.
ಮಗದೊಂದೆಡೆ ಅವಶೇಷಗಳಡಿಯೇ ಸಮಾಧಿಯಾದ ಜೀವಗಳು. ಸೂರು ಕಳೆದುಕೊಂಡು ಬೀದಿಪಾಲಾದ ಬದುಕು. ಹೆತ್ತವರ ಕಳೆದುಕೊಂಡು ಅನಾಥರಾದ ಮಕ್ಕಳ ಆಕ್ರಂದನ.. ಈ ಕರುಣಾಜನಕ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು.
ಇದು ಟರ್ಕಿ, ಸಿರಿಯಾ ರಾಷ್ಟ್ರಗಳ ದುರಂತ ಕಥೆ. ಪ್ರಕೃತಿ ಮುನಿಸು ಅದೆಷ್ಟು ಭಯಾನಕ? ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳು ಭೂಕಂಪಕ್ಕೆ ನಲುಗಿ ಹೋಗಿವೆ. ಭೀಕರ ಭೂಕಂಪದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಈವರೆಗೆ ಸುಮಾರು 25,000 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭೂಕಂಪಕ್ಕೆ ನೂರಾರು ಕಟ್ಟಡಗಳು ನೆಲಸಮಗೊಂಡಿವೆ. ಅವಶೇಷಗಳಡಿ ಜೀವಗಳ ಚೀತ್ಕಾರ ಕೇಳಿ ಬರುತ್ತಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಅಕ್ಷರಶಃ ಸ್ಮಾಶನ ಸದೃಶ ವಾತಾವರಣ ಸೃಷ್ಟಿಯಾಗಿದೆ.