ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಯಾವ ಬಣ್ಣದ ಗುಲಾಬಿ ಕೊಟ್ಟರೆ ಚೆನ್ನ....!

ನಾಗಶ್ರೀ ಭಟ್

ಗುರುವಾರ, 8 ಫೆಬ್ರವರಿ 2018 (18:11 IST)
ಪ್ರೇಮಿಗಳ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಅದೆಷ್ಟೋ ಹೊಸ ಜೋಡಿಗಳು ಒಂದಾಗಲು ಆತುರದಲ್ಲಿ ಕಾದು ಕುಳಿತಿವೆ. ಅಷ್ಟೇ ಅಲ್ಲ ಮೊದಲೇ ಒಂದಾಗಿದ್ದ ಪ್ರಣಯ ಪಕ್ಷಿಗಳು ತಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳಲು ತವಕಿಸುತ್ತಿವೆ. ಇದಲ್ಲದೇ ಮುದ್ದು ಹೃದಯವನ್ನು ಬೆಸೆಯುವ ಸಲುವಾಗಿ ಅದೆಷ್ಟೇ ಹೂಗಳು ಯಾರ ಮುಡಿ ಸೇರುವೆನೋ ಎನ್ನುವ ನಿರೀಕ್ಷೆಯಲ್ಲಿ ಹಿಗ್ಗುತ್ತಿವೆ.
ಕೆಲವರು ಪ್ರೀತಿಯಲ್ಲಿ ಮುಳುಗಿರುತ್ತಾರೆ, ಆದರೆ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ವ್ಯಕ್ತಪಡಿಸಿದರು ಅದು ಸಾಮಾನ್ಯವಾಗಿಯೇ ಇರುತ್ತದೆ ಎಂಬ ಭಯ ಕಾಡುತ್ತಿರುತ್ತದೆ. ಇನ್ನು ಕೆಲವರು ತನ್ನ ಪ್ರೇಮಿಗೆ ಕೆಂಪು ಗುಲಾಬಿಯನ್ನು ನೀಡುವ ಮೂಲಕ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತಾರೆ ಹಾಗೂ ಬೇರೆ ಬಣ್ಣದ ರೋಸ್‌ ನೀಡಲು ಅಂಜುತ್ತಾರೆ. ಅದಕ್ಕೂ ಒಂದು ಕಾರಣವಿದೆ, ಬೇರೆ ಬಣ್ಣದ ಹೂ ನೀಡಿದರೆ ಎಲ್ಲಿ ತಪ್ಪು ಗ್ರಹಿಕೆ ಆಗುತ್ತದೆಯೋ ಎನ್ನುವ ಭಯ. ನಿಜ ಹೇಳುವುದಾದರೆ ಪ್ರತಿಯೊಂದು ಬಣ್ಣದ ಹೂಗಳೂ ತನ್ನದೇ ಆದ ಅರ್ಥವನ್ನು ಹೊಂದಿರುತ್ತವೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನದಂದೇ ನಿಮ್ಮ ಪ್ರೇಮಿಯ ಬಗ್ಗೆ ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಹೇಗಂತಿರಾ ಇಲ್ಲಿದೆ ಮಾಹಿತಿ.
 
ಪ್ರೀತಿ ಎನ್ನುವುದು ಒಂದು ಸುಂದರ ಸುಮಧುರ ಭಾವನೆ. ಅದನ್ನು ಹೊರಹಾಕುವಾಗ ಅಂಜಿಕೆ ಇರುವುದು ಸಹಜವೇ. ಯಾವುದೇ ಹುಡುಗ ಅಥವಾ ಹುಡುಗಿ ತನ್ನ ಮನಸ್ಸಿನ ಭಾವನೆಯನ್ನು ಪ್ರೇಮಿಗಳ ದಿನದಂದೇ ತನ್ನ ಸಂಗಾತಿಗೆ ತಿಳಿಸಲು ಬಯಸುತ್ತಾರೆ. ಆದರೆ ಅದನ್ನು ಹೇಗೆ ಹೊರಹಾಕಬೇಕು ಎನ್ನುವ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡು ಸುಮ್ಮನಾಗುತ್ತಾರೆ. ಈ ಗುಲಾಬಿ ಹೂಗಳನ್ನು ಪ್ರೀತಿಯ ಸಂಕೇತವೆಂದೇ ಹೇಳಬಹುದು. ಬಣ್ಣ ಬಣ್ಣದ ಗುಲಾಬಿ ಹೂಗಳನ್ನು ನೀಡುವ ಮೂಲಕ ನಿಮ್ಮ ಮನಸಿನ ಭಾವನೆಗಳನ್ನು ನಿಮ್ಮ ಸಂಗಾತಿಗೆ ನೀವು ಸುಲಭವಾಗಿ ತಿಳಿಯಪಡಿಸಬಹುದು.
 
ಮೊದಲನೆಯದಾಗಿ ಕೆಂಪು ಬಣ್ಣದ ಗುಲಾಬಿ. ಎಲ್ಲರೂ ಸಾಮಾನ್ಯವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚಾಗಿ ಕೆಂಪು ಗುಲಾಬಿಯನ್ನೇ ಬಳಸುತ್ತಾರೆ. ಈ ಗುಲಾಬಿಯನ್ನು ನೀಡುತ್ತಿರುವ ವ್ಯಕ್ತಿಯು ನಿಮ್ಮನ್ನು ಅತೀಯಾಗಿ ಪ್ರೀತಿಸುತ್ತಿದ್ದಾನೆ/ಳೆ ಎನ್ನುವುದನ್ನು ಸೂಚಿಸುತ್ತದೆ.
 
ಇನ್ನು ಪೀಚ್ ಬಣ್ಣದ ಗುಲಾಬಿಗಳು ಸೌಮ್ಯ ಸ್ವಭಾವವನ್ನು ಸೂಚಿಸುತ್ತವೆ. ಅಂದರೆ ನೀವು ಒಂದು ವೇಳೆ ನಿಮ್ಮ ಸಂಗಾತಿಗೆ ಆ ಬಣ್ಣದ ಹೂ ನೀಡಿದರೆ ನೀವು ತುಂಬಾ ಮೃದು ಸ್ವಭಾವವನ್ನು ಹೊಂದಿದ್ದೀರಿ ಎಂಬುದನ್ನು ಈ ಮೂಲಕ ವ್ಯಕ್ತಪಡಿಸಬಹುದು.
 
ಇನ್ನೂ ಬಿಳಿ ಬಣ್ಣದ ಗುಲಾಬಿಗಳು, ನಿಮಗೆ ಸಂಗಾತಿ ಏನಾದರೂ ನೀಡಿದಲ್ಲಿ ಅವರು ಶಾಂತ ಸ್ವಭಾವದವರು ಮತ್ತು ಕಲ್ಮಶವಿಲ್ಲದ ಮನಸ್ಥಿತಿಯನ್ನು ಇದು ತೋರಿಸುತ್ತದೆ ಮತ್ತು ಪ್ರೀತಿಯ ಕುರಿತು ಹೆಚ್ಚಾಗಿ ತಿಳಿದಿಲ್ಲ ಎನ್ನುವುದನ್ನು ಸೂಚಿಸುತ್ತದೆ.
 
ಇನ್ನು ನೇರಳೆ ಬಣ್ಣದ ಗುಲಾಬಿಗಳು ತಮ್ಮ ಬಣ್ಮದಂತೆಯೇ ಆಕರ್ಷಣೀಯ ಸ್ವಭಾವವವಷ್ಟೇ ಅಲ್ಲ ಆಕರ್ಷಕ ವ್ಯಕ್ತಿತ್ವದ ವ್ಯಕ್ತಿಯಾಗಿರುತ್ತಾರೆ ಎನ್ನುವುದನ್ನು ಸೂಚಿಸುತ್ತದೆ.
 
ಹುಡುಗಿಯರು ಹೆಚ್ಚಾಗಿ ಇಷ್ಟಪಡುವ ಬಣ್ಣ ಗುಲಾಬಿಯಾಗಿದ್ದು ಈ ಬಣ್ಣದ ಹೂ ನೀಡುವವರು ಕೃತಜ್ಞ ಮನೋಭಾವದವರಾಗಿರುತ್ತಾರೆ ಮತ್ತು ಹೆಚ್ಚು ಕಾಳಜಿ ತೋರುವ ಗುಣವನ್ನು ಹೊಂದಿರುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.
 
ಸಾಮಾನ್ಯವಾಗಿ ಹಳದಿ ಬಣ್ಣದ ಗುಲಾಬಿ ಹೂಗಳು ನಿಮ್ಮ ಸಂಗಾತಿಯ ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವಂತೆ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ಅದನ್ನು ಸ್ನೇಹದ ಪ್ರತೀಕ ಎಂದು ಕೆಲವರು ಹೇಳುತ್ತಾರೆ.
 
ಹಲವು ಬಣ್ಣಗಳನ್ನು ಹೊಂದಿರುವ ಗುಲಾಬಿಗೆ ಮಳೆಬಿಲ್ಲಿನ ಗುಲಾಬಿಗಳು ಎಂದು ಕರೆಯುತ್ತಾರೆ. ಈ ಗುಲಾಬಿಗಳನ್ನು ಸಂತೋಷದ ಗುಲಾಬಿಗಳು ಎಂದೂ ಕರೆಯಲಾಗುತ್ತದೆ. ಈ ಗುಲಾಬಿ ಹೂಗಳು ಸಂತೋಷದ ದ್ಯೋತಕವಾಗಿದ್ದು ನಿಮ್ಮ ಸಂಗಾತಿಯು ಸಂತೋಷಪ್ರಿಯ ಎಂಬುದನ್ನು ಸೂಚಿಸುತ್ತದೆ ಅಷ್ಟೇ ಎಲ್ಲರ ಸಂತೋಷಕ್ಕಾಗಿ ಪರಿತಪಿಸುವ ಮನೋಭಾವನೆಯನ್ನು ಹೊಂದಿರುತ್ತಾನೆ ಎಂಬುದನ್ನು ಸೂಚಿಸುತ್ತದೆ.
 
ಒಟ್ಟಿನಲ್ಲಿ ಎಲ್ಲಾ ಗುಲಾಬಿಗಳು ಪ್ರೀತಿಯ ಸಂಕೇತವಾಗಿದ್ದು ನಿಮ್ಮ ಮನಸ್ಥಿತಿಗೆ ತಕ್ಕಂತೆ ಹೂಗಳನ್ನು ನೀಡಿ ಪ್ರೇಮಿಗಳ ದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ