ಅಬಲೆ, ಸಬಲೆ ಮತ್ತು ಪ್ರಬಲೆಯರ ನಡುವೆ

ಸವಿತಾ ಪಾಗಾದ್
PTI
ಮಹಿಳೆ ಅಬಲಳೋ, ಪ್ರಬಲಳೋ ಅಥವಾ ಸಬಲಳೋ ಎನ್ನುವುದು ಒತ್ತಟ್ಟಿಗಿರಲಿ. ಸಮಾಜ, ಅಷ್ಟೇ ಏಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಹಿಳೆ ಅಬಲೆ ಎಂದು, ಇನ್ನೂ ಕೆಲವರು ಸಬಲೆ ಎಂದು ವಾದಿಸುತ್ತಾರೆ. ವಾದಿಸುವವರು ವಾದಿಸಲಿ ಬಿಡಿ. ಮಹಿಳೆ ಇಂದು ಏನೇ ಆಗುವುದಕ್ಕೂ ಅವಳಿಗೆ ಅವಳೇ ಕಾರಣ.

"ತುಚ್ ಆಹೆಸ್ ತುಝ್ಯಾ ಜೀವನಾಚ್ ಶಿಲ್ಪಕಾರ್" ನೀನೆ ನಿನ್ನ ಜೀವನದ ಶಿಲ್ಪಿ. ಮಹಿಳೆ ಅಬಲೆಯಾಗುವುದಕ್ಕೂ ಅವಳೇ ಕಾರಣ ಸಬಲೆಯಾಗುವುದಕ್ಕೂ ಅವಳೇ ಕಾರಣ. ಯಾರೊಬ್ಬರ ಬದುಕನ್ನು ಇನ್ನ್ಯಾರೋ ಬಂದು ಕಟ್ಟಿಕೊಡುತ್ತಾರೆ ಅನ್ನುವುದು ಆಗುವ ಮಾತು ಅಲ್ಲ, ಸಾಗುವ ಮಾತು ಅಲ್ಲ.

ಮಹಿಳೆ ತಾನು ಸಬಲಳಾಗಬೇಕು ಸಶಕ್ತವಾಗಬೇಕು ಎಂದರೆ ಮೊದಲು ತಾನು ಪೂರ್ವಗ್ರಹಗಳಿಂದ ಹೊರಬರಬೇಕು. ಇನ್ನ್ಯಾರೋ ನನ್ನನ್ನು ತುಳಿಯುತ್ತಿದ್ದಾರೆ ಹತ್ತಿಕ್ಕುತ್ತಿದ್ದಾರೆ ಎನ್ನುವ ಭ್ರಮೆಯಲ್ಲಿ ಇರುವವಳು ಕೊನೆಯ ತನಕ ಅದೇ ಮಾನಸಿಕ ಭ್ರಮೆಯಲ್ಲಿ ಇರಬೇಕಾಗುತ್ತದೆ. ಉದಾಹರಣೆಗೆ ನಮ್ಮ ಗ್ರಾಮೀಣ ಮಹಿಳೆಯನ್ನು ಕುಡಿದು ಬರುವ ಗಂಡ ನಿತ್ಯ ಹೊಡೆಯುತ್ತಿರುತ್ತಾನೆ. ಅವಳು, ಅವನಿಗಿಂತ ದೈಹಿಕವಾಗಿ ಸಬಲಳಾಗಿರುತ್ತಾಳೆ. ಯಾಕೆ ಅನ್ನುವುದು ಇಲ್ಲಿ ವಿವರಿಸುವ ಅವಶ್ಯಕತೆ ಇಲ್ಲ. ಅವಳು ಯಾಕೆ ತಿರುಗಿ ನಿಲ್ಲುವುದಿಲ್ಲ? ಅದಕ್ಕೆ ಕಾರಣವೂ ಇದೆ. ತಾನು ಮಹಿಳೆ ನನ್ನಿಂದ ಏನೂ ಆಗುವುದಿಲ್ಲ ಎನ್ನುವ ಭ್ರಮೆ.

ಬದಲಾಗುತ್ತಿದ್ದಾಳೆ ಇಂದು ಮಹಿಳೆ. ತಾನು ಅಬಲೆ ಎನ್ನುವ ಭ್ರಮೆ ಕಿತ್ತು ಹಾಕುವ ಭರದಲ್ಲಿ ಮಹಿಳೆ ಇಂದು ಸಾಗುತ್ತಿರುವ ವೇಗ ಯಾರಿಗಾದರೂ ದಂಗು ಬಡಿಸುತ್ತಿದೆ. ಮಹಿಳೆಗೆ ಸ್ವಾತಂತ್ರ್ಯ ಎನ್ನುವುದು ಬೇಕು. ಪುರುಷರ ಸರಿಸಮನಾಗಿ ಕೆಲಸ ಮಾಡಬೇಕು.

ಮುಖ್ಯವಾಗಿ ಬಂದಿರುವ ಪ್ರಶ್ನೆ ಎಂದರೆ ಸ್ವಾತಂತ್ರ್ಯ ಮತ್ತು ಸ್ವೇಚ್ಛೆ... ಇಂದಿನ ಬಹುತೇಕ ಎಲ್ಲ ಚಿತ್ರರಂಗ, ಫ್ಯಾಷನ್ ಜಗತ್ತನ್ನು ಅಕ್ಷರಶಃ ಆಳುತ್ತಿರುವುದು ಮಹಿಳೆ. ಇಲ್ಲಿಯ ಸ್ವೇಚ್ಛೆಯೇ ಸ್ವಾತಂತ್ರ್ಯವಾ? ಆ ರೀತಿ ಸ್ವೇಚ್ಛಾ ವರ್ತನೆಗೆ ಪುರುಷರು ಕಾರಣರಾ? ಅಥವಾ ಅಬಲೆಯ ಶಬ್ದದಿಂದ ಶಾಪ ವಿಮೋಚನೆ ಪಡೆಯಲು ಮಹಿಳೆ ಮಾಡುತ್ತಿರುವ ಪ್ರಯತ್ನವಾ? ಇಲ್ಲ ಬದಲಾಗುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳಿಗೆ ಹಿಡಿದ ಕನ್ನಡಿಯಾ?

ತಾಯಿಯ ರೂಪದಲ್ಲಿನ ಗುರುವಾಗಿ ಜೀವನಕ್ಕೆ ಮಾರ್ಗದರ್ಶಿಯಾಗಬಲ್ಲ 'ಹೆಣ್ಣು' ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅರೆ ನಗ್ನತೆಗೆ ಪ್ರಾಮುಖ್ಯತೆ ನೀಡುವುದು ಎಷ್ಟು ಸರಿ? ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯಲ್ಲಿ ಪುರುಷ- ಮಹಿಳೆಯರ ಪಾತ್ರ ಎಷ್ಟು ಎನ್ನುವುದು ವಿವೇಚನೆ ಮತ್ತು ವಿಮರ್ಶೆಗೆ ಒಳಪಡಬೇಕಿದೆ.