ಕಳೆದುಹೋಗುತ್ತಿದ್ದಾಳೆ.......

ಶಾನಿ
ND
ಹೌದು! ಹೆಣ್ಣು ಕಳೆದುಹೋಗಿದ್ದಾಳೆ. ನೋಡ ನೋಡುತ್ತಿರುವಂತೆಯೆ, ಹೆಣ್ಣಿನ ಬಗ್ಗೆ, ಆಕೆಯ ಉನ್ನತಿಯ ಬಗ್ಗೆ, ಆಕೆಯ ಶಕ್ತಿಯ ಬಗ್ಗೆ, ಆಕೆಯ ಒಳಿತು ಕೆಡುಕುಗಳ ಬಗ್ಗೆ ಚರ್ಚೆಗಳು ಆಗುತ್ತಿರುವಂತೆ, ಸಮಾಜದಲ್ಲಿ ಆಕೆಗೆ ಉತ್ತಮ ಶಿಕ್ಷಣ-ಸ್ಥಾನಮಾನ ನೀಡುವ ಎಲ್ಲ ಪ್ರಯತ್ನಗಳೂ ನಡೆಯುತ್ತಿರುವಂತೆಯೇ ಹೆಣ್ಣು ಕಾಣೆಯಾಗುತ್ತಿದ್ದಾಳೆ. ಅಂದರೆ ಆಕೆ ಈ ಭೂಮಿಗೆ ಬರದಂತೆಯೇ ಕಾಣೆಯಾಗುತ್ತಿದ್ದಾಳೆ.

ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಹೈ-ಟೆಕ್ ಆಗುತ್ತಿರುವ ಈ ಯುಗದಲ್ಲಿ ಉದರದೊಳಗೆ ಮಿಸುಗುತ್ತಿರುವ ಭ್ರೂಣ ಹೆಣ್ಣೆಂದು ತಿಳಿಯುತ್ತಲೆ, ಹೈ-ಟೆಕ್ಕಾಗಿ ಸದ್ದಿಲ್ಲದೆ ಆ ಭ್ರೂಣದ ಸದ್ದಡಗಿಸಲಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತದ ಈ ಬೆಳವಣಿಗೆ ಭಯಾನಕ. ಆಫ್ರಿಕಾದ ಕೆಲೆವಡೆ ಹೆಣ್ಣಿನ ಅಂಗಾಂಶಗಳನ್ನೇ ಕತ್ತರಿಸುವ ಹೀನಾತಿಹೀನ ಪ್ರಕ್ರಿಯೆಗಳು ನಡೆಯುತ್ತಿವೆ, ಜಾಗತಿಕವಾಗಿ ಮಹಿಳೆಯ ವಿರುದ್ಧದ ಹಿಂಸೆಯ ಸ್ಪರ್ಧೆಯಲ್ಲಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಚಾಂಪಿಯನ್ ಎಂದರೆ ತಪ್ಪಲ್ಲ.

ಒಂದಷ್ಟು ವರ್ಷಗಳ ಹಿಂದೆ ಹೋದರೆ ಹೆಣ್ಣುಮಕ್ಕಳಿಗೆ ಗುಲಾಮರ ಸ್ಥಾನಮಾನ ಲಭಿಸುತ್ತಿದ್ದರೂ ಭೂಮಿಗೆ ಬರುವ ಅವಕಾಶವಿತ್ತು. ಇದೀಗ ಉನ್ನತ ತಾಂತ್ರಿಕತೆಯಿಂದಾಗಿ, ಹೆಣ್ಣು ಈ ಭೂಮಿಯಲ್ಲಿ ಕಣ್ಣು ಬಿಡುವ ಅವಕಾಶದಿಂದಲೇ ವಂಚಿತಳಾಗಿದ್ದಾಳೆ! ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಉದರದಲ್ಲಿರುವ ಭ್ರೂಣ ಗಂಡೋ ಹೆಣ್ಣೋ ಎಂದು ಪತ್ತೆ ಹಚ್ಚಿ, ಅದು ಹೆಣ್ಣಾದರೆ ಅಲ್ಲೇ ಮುಗಿಸಿ ಬಿಡುವ ಕೆಲಸ ನಡೆದು ಹೋಗುತ್ತದೆ.
ND


ಈ ಒಂದು ವಿಷಯದಲ್ಲಿ ಜಾತಿ-ಮತ-ಭೇದವಿಲ್ಲದಂತೆ ಎಲ್ಲ ಪಂಗಡಗಳಲ್ಲೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಗಂಡು ಮಕ್ಕಳಾದರೆ ಆಸ್ತಿ: ಹೆಣ್ಣು ಮಕ್ಕಳಾದರೆ ಹೊರೆಯೆಂಬ ಈ ಮನೋಭಾವ, ಗಂಡು ಹೆಣ್ಣುಗಳ ಸಂಖ್ಯೆಯಲ್ಲಿ ಅಗಾಧವಾದ ಅಂತರ ಸೃಜಿಸಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಭಯಾನಕ ಪರಿಸ್ಥಿತಿ ಗೋಚರವಾಗುತ್ತದೆ. 1990ರ ಜನಗಣತಿ ಪ್ರಕಾರ ಹೆಂಗಸರಿಗಿಂತ ಗಂಡಸರ ಸಂಖ್ಯೆಯು 25 ಮಿಲಿಯನ್‌ಗಳಷ್ಟು ಅಧಿಕವಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರ ಅಲ್ಟ್ರಾಸೌಂಡ್ ಮೂಲಕ ಮಗುವಿನ ಲಿಂಗ ಪತ್ತೆಹಚ್ಚುವುದನ್ನು ಕಾನೂನುಬಾಹಿರ ಎಂದು ಘೋಷಿಸಿತು.

ಕಾನೂನು ಇರುವುದು ಉಲ್ಲಂಘಿಸಲು ಎಂಬ ಹಠಕ್ಕೆ ಬಿದ್ದಂತೆ ಭ್ರೂಣದ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣದ ಹತ್ಯೆ ಅವ್ಯಾಹತವಾಗಿ ಮುಂದುವರಿಯಿತೆಂಬುದಕ್ಕೆ ಸಾಕ್ಷಿ 2001ರ ಜನಗಣತಿ. ಇಲ್ಲಿ ಗಂಡು ಹೆಣ್ಣಿನ ನಡುವಣ ಅಂತರ 35 ಮಿಲಿಯ(350 ಲಕ್ಷ)ಕ್ಕೇರಿದೆ. ಹೆಂಗಸರೇ ಇಲ್ಲದ ಸಮಾಜವನ್ನು ಊಹಿಸಲು ಸಾಧ್ಯವೆ?

ಭಾರತದಲ್ಲಿ ಹೆಣ್ಣು ಶಿಶುಗಳ ಅಥವಾ ಹೆಣ್ಣು ಭ್ರೂಣ ಹತ್ಯೆಗೆ ಸುದೀರ್ಘ ಇತಿಹಾಸವೇ ಇದೆ. ಸಾಂಸ್ಕೃತಿಕವಾಗಿ, ಸಾಂಪ್ರದಾಯಿಕವಾಗಿ ಎಲ್ಲ ಸಮಾಜಗಳಲ್ಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರುವ ಕಾರಣ ಹೆಣ್ಣು ಮಕ್ಕಳು ಹುಟ್ಟಿ ಕಣ್ಣು ಬಿಡುತ್ತಲೆ ಅವರ ಕಣ್ಣನ್ನು ಬಲವಂತವಾಗಿ ಮುಚ್ಚಿಸಲಾಗುತ್ತಿತ್ತು. ಅಂದರೆ ಹೆಣ್ಣು ಶಿಶುಗಳು ಹುಟ್ಟುತ್ತಲೇ ಅವುಗಳಿಗೆ ಸಾವು! ಆಧುನಿಕ ತಂತ್ರಜ್ಞಾನ ಈಗ ಇನ್ನಷ್ಟು ಪಾಲಿಶ್ಡ್ ರೀತಿಯಲ್ಲಿ, ಕಿಂಚಿತ್ ಪಶ್ಚಾತ್ತಾಪವೂ ಮೊಳೆಯದಂತೆ ಈ ಕೆಲಸ ಮುಗಿಸಿಕೊಡುತ್ತದೆ. ಇದು ವೈದ್ಯರಿಗೂ ಅತ್ಯಂತ ಲಾಭದಾಯಕ ವ್ಯಾಪಾರವಾಗಿದೆ.

PTI
ಹಿಂದೂಗಳ ವಿಚಾರಕ್ಕೆ ಬಂದರೆ ಹೆತ್ತವರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳಿಗೆ ಗಂಡು ಮಕ್ಕಳು ಅಗತ್ಯ. ಬದುಕಿದ್ದಾಗಕ್ಕಿಂತ, ಸತ್ತನಂತರದ ಲೆಕ್ಕಾಚಾರ ಗಂಡುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ನಾನು ಅನುಭವಿಸಿದ ಈ ಜೀವನ ಯಾತನೆ ನನ್ನ ಮಗಳಿಗೆ ಬೇಡವೆಂಬ ನೆಲೆಯಲ್ಲೂ ಹೆಣ್ಣು ಮಗು ಬೇಡ ಎನ್ನುವ ಅಮ್ಮಂದಿರೂ ಇದ್ದಾರೆ.

ಬರಿಯ ಹಿಂದೂಗಳು ಮಾತ್ರವಲ್ಲ, ಸಿಕ್, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲೂ ಹೆಣ್ಣು ಭ್ರೂಣ ಹತ್ಯೆ ಸಾಂಕ್ರಾಮಿಕವಾಗಿದೆ. ಅಯ್ಯೋ, ಹೆಣ್ಣು ಮಕ್ಕಳನ್ನು ಸಾಕಿ, ಸಲಹಿ ಬೆಳಸಿ ಮದುವೆ ಮಾಡಿ ಕೊಡುವುದೆಂದರೆ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಂತೆ, ಗಂಡು ಮಕ್ಕಳಾದರೆ ಹೆಗಾದರೂ ಬದುಕಿಕೊಳ್ಳುತ್ತಾವೆ ಎಂಬ ಧೋರಣೆಗಳು. ಅತ್ಯಾಚಾರದಂತಹ ಅನಾಚಾರಗಳ ಭಯಾನಕ ಭೀತಿಗಳೂ ಇದಕ್ಕೆ ಕಾರಣ. ದಿನೇ ದಿನೇ ಹೆಚ್ಚುತ್ತಿರುವ ಮದುವೆವರಗಳ ರೇಟೂ ಸಹ ಹೆಣ್ಣು ಹೆತ್ತವರನ್ನು ಹೈರಾಣಾಗಿಸುತ್ತದೆ. ಇದೆಲ್ಲ ರಗಳೆಯೇ ಬೇಡವೆಂದು ಸುಶಿಕ್ಷಿತ ಹೆತ್ತವರೂ ಗಂಡುಮಕ್ಕಳನ್ನು ಬಯಸುತ್ತಿರುವುದು ವಿಪರ್ಯಾಸ.

ಅಂತೆಯೇ ಬಡ ಮತ್ತು ಅನಕ್ಷರಸ್ಥ ಕುಟುಂಬಗಳಲ್ಲೂ ವರದಕ್ಷಿಣೆ ಮತ್ತು ವರನ ಮನೆಯವರ ಮುಗಿಯದ ಬೇಡಿಕೆ, ನಿರಂತರ ಹಿಂಸೆಗಳಿಗೆ ಬೆದರಿ ಹಾಗೂ ಇತರ ಕಂದಾಚಾರದ ಮೂಢನಂಬಿಕೆಗಳು, ಪೂರ್ವಗ್ರಹಗಳಿಂದಾಗಿ ಹೆಣ್ಣು ಮಕ್ಕಳು ಅನಪೇಕ್ಷಿತರಾಗುತ್ತಿದ್ದಾರೆ.

ವಿಶ್ವಸಂಸ್ಥೆ ಮತ್ತು ಭಾರತೀಯ ಅಧ್ಯಯನಗಳು ಕಂಡುಕೊಂಡಂತೆ ಶ್ರೀಮಂತ ಮತ್ತು ಸುಶಿಕ್ಷಿತ ಕುಟುಂಬಗಳಲ್ಲಿ ಇಂದು ಹೆಣ್ಣು ಭ್ರೂಣ ಹತ್ಯೆ ಸಹಜ ಪ್ರಕ್ರಿಯಾಗುತ್ತಿದೆ. ಒಂದು ಅಧ್ಯಯನ ನಕಾಶೆಯ ಪ್ರಕಾರ ಈ ಕೃತ್ಯ ಎಸಗುವವರಲ್ಲಿ ವಿಶ್ವವಿದ್ಯಾನಿಲಯಗಳ ಪದವಿ ಪಡೆದವರ ಸಂಖ್ಯೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಉತ್ತಮ ವಿದ್ಯಾಭ್ಯಾಸ ಪಡೆದವರದ್ದಾದರೆ ಕೆಳಮಟ್ಟದ ಶಿಕ್ಷಣ ಪಡೆದವರಲ್ಲಿ ತುಲನಾತ್ಮಕವಾಗಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುವವರ ಸಂಖ್ಯೆ ಕಡಿಮೆ.

ಹೆಣ್ಣು ಭ್ರೂಣ ಹತ್ಯೆ ಮತ್ತು ಸ್ತ್ರಿ ಪುರುಷರ ನಡುವಿನ ಅಂತರದ ಪರಿಣಾಮ ಈಗಾಗಲೇ ವ್ಯಕ್ತವಾಗುತ್ತಿದೆ. ಮದುವೆ ಹೆಣ್ಣುಗಳ ಅಲಭ್ಯತೆ ತಲೆದೋರಿದೆ. ಬಡರಾಷ್ಟ್ರಗಳಾದ ಬಾಂಗ್ಲ, ನೇಪಾಳ ಅಥವಾ ನಾಗರೀಕತೆಯಡೆಗೆ ಮುಖಮಾಡದ ಭಾರತೀಯ ಆದಿವಾಸಿ ಪಂಗಡಗಳ ಹೆಣ್ಣುಮಕ್ಕಳ ಮಾರಾಟ ನಡೆಯುತ್ತಿದೆ. ಈ ಮಾರಾಟ ವಸ್ತುಗಳ ಬೆಲೆಯಾದರೂ ಎಷ್ಟೆಂದು ಕೇಳಿದಿರಾ, ಬರಿಯ 200 ಡಾಲರ್‌ಗಳು. ಹರ್ಯಾಣದಲ್ಲಿ ಒಂದೊಳ್ಳೆಯ ಗೂಳಿಯ ಬೆಲೆ 1000 ಡಾಲರ್‌ಗಳು! ಇದೀಗಾಗಲೇ 55 ಮಿಲಿಯ ಸ್ತ್ರಿಯರು ಕಾಣೆಯಾಗಿದ್ದಾರೆ. ಹಾಗಾಗಿ ಈ ಅಪಾಯಕರ ಪರಿಸ್ಥಿತಿಯಿಂದ ಪಾರಾಗುವುದು ಕಠಿಣ. ಸಮಾಜದಲ್ಲಿ ಇಂದಿಗೂ ಮಹಿಳೆ ದ್ವಿತೀಯ ದರ್ಜೆಯವಳಾಗೇ ಇದ್ದರೂ, ಮಹಿಳೆ ವಿನಾಶದತ್ತ ಸರಿಯುತ್ತಿದ್ದಾಳೆ.

ಸರಕಾರಕ್ಕೆ ಈ ಗಂಭೀರ ಸ್ಥಿತಿಯ ಮನವರಿಕೆಯಾಗಿದೆ. ಮಹಿಳಾಶಕ್ತಿಯ ಕುರಿತು ಆರೋಗ್ಯ ಸಚಿವಾಲಯದ ಜಾಹಿರಾತುಗಳು ಮಾಧ್ಯಮಗಳಲ್ಲಿ ಆಗೀಗ ಕಾಣಬರುತ್ತಿವೆ. ಈ ಸಲುವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಣ್ಣುಭ್ರೂಣ ಹತ್ಯೆ ವಿರೋಧಿಸಿ ಜಾಥಾ ಹಮ್ಮಿಕೊಂಡಿದ್ದೂ ಇದೆ. ಸರಕಾರ ಎಚ್ಚರಿಕೆ ನೀಡುತ್ತಲೂ ಇದೆ.

ಹೆಣ್ಣು ಭ್ರೂಣಹತ್ಯೆಗೆ ತಡೆ ಬಿದ್ದರೆ ಮಾತ್ರ ಸಾಕಾಗುವುದಿಲ್ಲ. ಎಲ್ಲಾ ವಿಧದ ಲಿಂಗತಾರತಮ್ಯ ಕೊನೆಗೊಳ್ಳಬೇಕು. ಎಷ್ಟೆಂದರೂ ಹೆಣ್ಣೆಂಬ ತುಚ್ಛ ಮನೋಭಾವ ಎಲ್ಲಿಯವರೆಗೆ ತೊಲಗುವುದಿಲ್ಲವೊ, ಅಲ್ಲಿಯ ತನಕ ಆಕೆಯ ಸ್ಥಿತಿ ಗಂಡಾಂತರದ್ದೇ. ದೈಹಿಕ ಭಿನ್ನತೆಗಳನ್ನು ಬಿಟ್ಟರೆ ಎಲ್ಲರೂ ಮಾನವರೇ ಎಂಬ ಮನೋಭಾವ ಪುರುಷ, ಮಹಿಳೆಯರೆನ್ನದೆ ಎಲ್ಲರಲ್ಲಿ ಎಂದಿಗೆ ಹುಟ್ಟಿಕೊಳ್ಳುತ್ತದೊ ಅಂದು ಈ ಸಮಸ್ಯೆಯ ಪರಿಹಾರ ಆರಂಭವಾದಂತೆ.

ಹಿಂದೂ, ಕ್ರಿಶ್ಚಿಯನ್, ಮುಸ್ಲಿಮ್, ಸಿಕ್,ಪಾರ್ಸಿ ಅಥವಾ ಜೈನ್ ಯಾವ ಪಂಗಡದವಳೇ ಆಗಿರಲಿ, ಮಹಿಳೆಯರಿಗೆ ಎಲ್ಲೆಡೆ ದ್ವಿತೀಯ ದರ್ಜೆಯ ಸ್ಥಾನಮಾನ, ವರದಕ್ಷಿಣೆ ಬೇಡಿಕೆ ಶಿಕ್ಷಾರ್ಹ ಅಪರಾಧ ಎಂದೆಲ್ಲ ದೇಶದ ಕಾನೂನೂ ಏನೇ ಹೇಳಲಿ, ವಾರ್ಷಿಕ 25,000 ವರದಕ್ಷಿಣೆ ಸಾವುಗಳು ಸಂಭವಿಸುತ್ತಿವೆ. ಬಾಲ ವಿಧವೆಯರು ಅತ್ಯಂತ ಹೇಯಕರ ಬದುಕು ಸಾಗಿಸುತ್ತಿರುವ ದೃಷ್ಟಾಂತಗಳು ಇಂದಿಗೂ ಇವೆ ಮತ್ತು ಅವರು ಮರು ಮದುವೆಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಕೆಳವರ್ಗದ ಹೆಣ್ಣು ಮಕ್ಕಳಿಗೆ ಈಗ ಶಿಕ್ಷಣದ ಅವಕಾಶ ಲಭಿಸುತ್ತಿದ್ದರೂ ಅವರ ಮೇಲೆ ಮನೆಗೆಲಸದ ಹೊರೆ ಇರುತ್ತದೆ. ಹಾಗಾಗಿ ವಿದ್ಯೆ ಅರ್ಧಕ್ಕೆ ನೈವೇದ್ಯವಾಗುವ ಉದಾಹರಣೆಗಳೇ ಜಾಸ್ತಿ. ಎಲ್ಲ ಧರ್ಮಗಳಲ್ಲೂ ಧರ್ಮಾತೀತ ಎಂಬಂತೆ ಮಗಹುಟ್ಟಿದರೆ ಸಂಭ್ರಮ, ಮಗಳು ಹುಟ್ಟಿದರೆ ದುಃಖ!

ಎಲ್ಲಿ ಮಗ ಮತ್ತು ಮಗಳಿಗೆ ಸಮಾನ ಆದ್ಯತೆ ಇಲ್ಲವೋ, ಎಲ್ಲಿಯ ತನಕ ಮಹಿಳೆಗೆ ಸುರಕ್ಷಿತ ಬದುಕು ಲಭಿಸುವುದಿಲ್ಲವೋ ಅಲ್ಲಿಯ ತನಕ ಆ ರಾಷ್ಟ್ರದಲ್ಲಿ ನೈತಿಕತೆ ನೆಲೆಗೊಳ್ಳುವುದಿಲ್ಲ. ಹುಟ್ಟಿನಿಂದ ಸಾವಿನ ತನಕ ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಗೌರವಿಸುವಂತಹ ಕಾಲ ಬಂದಾಗ ಎಲ್ಲ ಸಮಸ್ಯೆಗಳು ತಂತಾನೇ ಕೊನೆಗೊಳ್ಳುತ್ತವೆ.