ಮಹಿಳೆಯರಿಗೆ ಯಾಕೆ ಮೀಸಲಾತಿ ಬೇಡ?

ಚಂದ್ರಾವತಿ ಬಡ್ಡಡ್ಕ
PTI
ಮಹಿಳೆಯರಿಗೆ ಮೀಸಲಾತಿ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಮೂವತ್ತಮೂರು ಶೇಖಡಾ ಮೀಸಲಾತಿ ಜಾರಿಗೆ ಶಾಸನ ಹೊರಡಿಸಲು ಮುಂದಾಗಿದ್ದರೂ ಸರ್ವಪಕ್ಷಗಳು ಒಮ್ಮತದ ಅಭಿಮತಕ್ಕೆ ಬರುವಲ್ಲಿ ಸೋತಿರುವ ಕಾರಣ ಈ ಮಸೂದೆ ನನೆಗುದಿಗೆ ಬಿದ್ದಿದೆ. ರಾಜಕೀಯ ಪಕ್ಷಗಳು ಮಹಿಳೆಯರ ಉನ್ನತಿ ಬಗ್ಗೆ ಗಡದ್ದಾಗಿ ಭಾಷಣ ಬಿಗಿದರೂ, ಶೇ.33ರ ಮೀಸಲಾತಿ ನೀಡಲು ಸಿದ್ಧರಿಲ್ಲ. ಮಹಿಳೆಯರಿಗೆ ಮೀಸಲಾತಿ ನೀಡಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬುದು ಪುರುಷ ರಾಜಕಾರಣಿಗಳ ಭಯ. ಹಾಗಾಗಿ ಮಹಿಳೆಯರಿಗಾಗಿ ಶೇ.33 ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ರಚನೆಯಾಗಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿರುವುದು.

ರಾಜಕೀಯ ಕ್ಷೇತ್ರ ಇರಲಿ, ಅಥವಾ ಇತರ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು, ಇದರಿಂದ ಮಹಿಳಾ ಸಬಲೀಕರಣ ಸಾಧ್ಯ ಎಂಬುದು ಪುರಾತನ ಚಿಂತನೆ. ಆದರೆ ಮಹಿಳೆಯರಿಗೆ ಮೀಸಲಾತಿ ನೀಡುವುದು ಮಹಿಳಾ ಸಬಲೀಕರಣ ಅಥನಾ ಉನ್ನತಿಗೆ ಕಾರಣವಾಗುವುದಿಲ್ಲ. ಬದಲಿಗೆ, ಮೀಸಲಾತಿ ನೀಡಿದರೆ ಮಹಿಳೆಯರನ್ನು ತುಚ್ಛವಾಗಿ ಕಾಣುವ ಒಂದು ವರ್ಗದ ಹೀಗಳಿಕೆಗೆ ಅದು ಇನ್ನಷ್ಟು ಇಂಧನ ಸುರಿಯುತ್ತದೆ. ಹೇಗೆಂದರೆ, ಮೀಸಲಾತಿ ಮೂಲಕ ಬಂದಲ್ಲಿ ಅನುಭವ ಅಥವಾ ಕೌಶಲ್ಯ ತುಲನಾತ್ಮಕವಾಗಿ ಕಮ್ಮಿ ಇರುತ್ತದೆ. ಇದರಿಂದ ಅವರ ಕಾರ್ಯಕ್ಷಮತೆ ಪರೋಕ್ಷವಾಗಿ ಕ್ಷೀಣಿಸುವ ಕಾರಣ ಕೆಲಸಕ್ಕೆ ಬಾರದವರು ಎಂಬ ಅಡ್ಡಚಿಂತನೆಗೆ ಪುಷ್ಟಿ ನೀಡುತ್ತದೆ.

ರಾಜಕೀಯ ಕ್ಷೇತ್ರವನ್ನೇ ತೆಗೆದುಕೊಳ್ಳೋಣ. ಮೀಸಲಾತಿಯಿಂದ ಸ್ಥಾನಗಿಟ್ಟಿಸಿದ ಮಹಿಳಾ ರಾಜಕಾರಣಿಯರನ್ನು ಆಳುವುದು ಅವರ ಮನೆಯವರು. ಮೀಸಲಾತಿ ಮಹಿಳೆ ಮೇಯರ್ ಆಗಿದ್ದರೆ, ಬೈ ಡೀಫಾಲ್ಟ್ ಮೇಯರ್ ಆಕೆಯ ಪತಿ ಅಥವಾ ಇತರ ಯಾರಾದರೂ ಅನುಭವ ಇರುವ ಗಂಡಸು. ಬಿಹಾರದಲ್ಲಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂಪ್ರಸಾದ್ ಯಾದವ್ ಜೈಲಿಗೆ ಹೋಗುವ ಸಂದರ್ಭದಲ್ಲಿ ತನ್ನ ಪತ್ನಿ ರಾಬ್ರಿದೇವಿಯನ್ನು ತಂದು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಿದಂತೆ. ಇಂತಹ ನಾಮಕಾವಸ್ಥೆ ರಾಜಕಾರಣಿ ಮಹಿಳೆಯರ ಗಂಡಂದಿರು ಅಧಿಕಾರ ಚಲಾಯಿಸುವ ಉದಾಹರಣೆಗಳು ಎಷ್ಟಿಲ್ಲ?
PTI


ಭಾರತೀಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವೀ ರಾಜಕಾರಣಿಯಾಗಿದ್ದಲ್ಲಿ, ಇವರು ಹತ್ತು ವರ್ಷಗಳಿಗೂ ಮಿಕ್ಕು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಲ್ಲಿ, "ಸಂಸತ್ತಿನಲ್ಲಿರುವ ಏಕೈಕ ಗಂಡಸು ಇಂದಿರಾಗಾಂಧಿ" ಎಂದು ಕರೆಸಿಕೊಂಡಿದ್ದರೆ ಅದಕ್ಕೆ ಮೀಸಲಾತಿ ಕಾರಣವಲ್ಲ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತು ರಾಜಕೀಯ ಕುಟುಂಬದಲ್ಲಿ ಹುಟ್ಟಿಬೆಳೆದು ಅವರು ನಿಕಟವಾಗಿ ರಾಜಕೀಯದ ಒಳಹೊರಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆ ಕಾರಣ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಾಯಾವತಿ ಯಶಸ್ವಿರಾಜಕಾರಣಿ. ಆದರೆ ಇದಕ್ಕೆ ಅವರ ಜಾತಿ ಅಥವಾ ಮೀಸಲಾತಿ ಮಾತ್ರ ಕಾರಣವಲ್ಲ. ಅವರು ಪಡೆದಿರುವ ಉತ್ತಮ ಶಿಕ್ಷಣವೂ ಕಾರಣ. ಐಎಎಸ್ ಅಧಿಕಾರಿಣಿಯಾಗಬೇಕೆಂದು ಬಯಸಿದ್ದ ಅವರು ರಾಜಕೀಯಕ್ಕೆ ಇಳಿದದ್ದು ಕಾಕತಾಳೀಯ. ಸುಶಿಕ್ಷಿತ ಮಹಿಳಾ ರಾಜಕಾರಣಿಗಳು ಮತ್ತು ಇತರ ರಾಜಕಾರಣಿಗಳ ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನು ಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೇದ್ಯವಾಗುತ್ತದೆ.

ನಾವು ಮಹಿಳೆಯರು, ಇಂದಿನ ಸ್ಥಿತಿಗತಿಗಳಿಗೆ ನಿಜವಾಗಲೂ ಸಂತಸ ಪಡಬೇಕು. ಕ್ರಮೇಣವಾಗಿ ಈಗಿನ ಜನಾಂಗದ ಎಲ್ಲಾ ಮಹಿಳೆಯರು ಕನಿಷ್ಠ ವಿದ್ಯಾಭ್ಯಾಸ ಪಡೆಯುವ ಅದೃಷ್ಟ ಕಂಡುಕೊಳ್ಳುತ್ತಿದ್ದಾರೆ. ಈ ಶಿಕ್ಷಣ ಅವರ ಬದುಕಿನ ದಿಕ್ಕನ್ನೇ ಬದಲಿಸುತ್ತಿದೆ. ಹೆಣ್ಣು ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ, ತಾಯಾಗಿ, ಅಜ್ಜಿಯಾಗಿ...... ಸಲಹುವವಳು ಎಂಬಂತ ಕ್ಲೀಷೆಯ ಧೋರಣೆಗಳು ಬದಲಾಗುತ್ತಿರುವುದು ಆರೋಗ್ಯಕರ. ಯಾವುದೇ ಕ್ಷೇತ್ರದಲ್ಲೂ ಆಕೆ ಯಶಸ್ಸು ಗಳಿಸುವ ಶಕ್ತಿ, ಸಾಮರ್ಥ್ಯ ಹೊಂದಿದ್ದಾಳೆ. ಮತ್ತು ಆಕೆ ತನ್ನ ಸ್ವಪ್ರಯತ್ನದಿಂದ ಏನನ್ನೂ ಸಾಧಿಸಲು ಶಕ್ತಳಾಗಿದ್ದಾಳೆ.

ND
ಕಾರ್ಪೋರೆಟ್ ಸಂಸ್ಥೆಗಳಲ್ಲಿ ದುಡಿಯುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತೇವೆ. ಇಲ್ಲಿ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಮಿಂಚುತ್ತಿದ್ದರೆ ಅದಕ್ಕೆ ಮೀಸಲಾತಿ ಖಂಡಿತವಾಗಿಯೂ ಕಾರಣವಲ್ಲ. ಅವರು ಪಡೆದಿರುವ ಉತ್ತಮ ಶಿಕ್ಷಣ, ತರಬೇತಿ ಮತ್ತು ಕಾರ್ಯಕ್ಷಮತೆ, ಪರಿಸ್ಥಿತಿಯನ್ನು ನಿಭಾಯಿಸುವ ಚಾಕಚಕ್ಯತೆ, ಅಚ್ಚುಕಟ್ಟುತನ ಮನೋಬಲ ಅವರಿಗೆ ಹುದ್ದೆ ಗಳಿಸುವ ಅರ್ಹತೆ ಒದಗಿಸುತ್ತದೆ. ಖಾಸಗಿ ವಲಯದ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಪ್ರಮುಖ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆ ಮಹಿಳೆಯರದ್ದು. ಪೆಪ್ಸಿ ಅಂತಾರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥೆ ಇಂದ್ರಾ ನೂಯಿ ಇನ್ನೊಂದು ಉದಾಹರಣೆ.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಆಂಗ್ ಸಾನ್ ಸೂಕಿ ಅಥವಾ ಪಾಕಿಸ್ತಾನದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಇಲ್ಲವೇ, ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಅಗ್ಗಳಿಕೆಯ ಪ್ರತಿಭಾ ಪಾಟೀಲ್- ಇವರೆಲ್ಲ ಹೊಂದಿರುವ ಶಿಕ್ಷಣ ಮತ್ತು ಅನುಭವಗಳು ಅವರನ್ನು ಯಶಸ್ವೀ ಮಹಿಳೆಯರ ಸ್ಥಾನದಲ್ಲಿ ನಿಲ್ಲಿಸಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಅತ್ಯಂತ ಸಣ್ಣವಯಸ್ಸಿನಲ್ಲಿ ಅಂತರಿಕ್ಷದಲ್ಲೇ ಭಸ್ಮವಾದ ಮಹಿಳೆ ಕಲ್ಪನಾ ಚಾವ್ಲ. ಈಕೆ ಅಂತಹಾ ಸಿರಿವಂತ ಕುಟುಂಬದಿಂದ ಬಂದವರಲ್ಲ. ಚಿಕ್ಕಬಾಲಕಿಯಾಗಿದ್ದಾಗ ಆವರು ಕಂಡ ಕನಸು, ಅವರೊಳಗಿನ ಮಹತ್ವಾಕಾಂಕ್ಷೆಯ ತುಡಿತ, ಗುರಿಸಾಧನೆಯ ಹಠ ಮತ್ತು ಅದಕ್ಕೆ ನೀರೆರೆದ ಅವರ ಸುತ್ತಮುತ್ತಲ ಮಂದಿ ಅವರ ಕನಸು ಸಾಕಾರವಾಗಲು ಕಾರಣ.

ನಮ್ಮ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವಂತಹ ಸ್ತ್ರೀಶಕ್ತಿ ಸಂಘಗಳನ್ನು ಗಮನಿಸಿದರೆ, ಅವುಗಳು ನಿಜವಾಗಿಯೂ ಅದ್ಭುತ ಕಾರ್ಯವೆಸಗುತ್ತಿವೆ. ಸಂಘಟನೆಯ ಸಾಮರ್ಥ್ಯವೇನು ಎಂಬುದು ಅವರೊಳಗಿನ ಆತ್ಮವಿಶ್ವಾಸವನ್ನು ಕಂಡಾಗ ಅರ್ಥವಾಗುತ್ತದೆ. ತಮ್ಮೊಳಗೆ ಸಂಘಟಿತರಾಗುವ ಗ್ರಾಮಗಳ, ಹಳ್ಳಿಗಳ ಮಹಿಳೆಯರು ಆರ್ಥಿಕ ಸಬಲತೆಯನ್ನೂ ಕಂಡುಕೊಳ್ಳುತ್ತಿದ್ದಾರೆ. ಬೆರಗು ಮೂಡಿಸುವಂತಹ ಈ ಬೆಳವಣಿಗೆ ಸ್ವಾಗತಾರ್ಹ. ಮೀಸಲಾತಿಗಿಂತ ಇಂತಹ ಕಾರ್ಯಗಳು ಹೆಚ್ಚೆಚ್ಚು ಆದರೆ, ಮಹಿಳೆ ತನ್ನ ಚಿಪ್ಪಿನಿಂದ ಹೊರಬರುತ್ತಾಳೆ. ಹೆಣ್ಣಾಗಿರುವುದು ಶಾಪವಲ್ಲ, ಸ್ತ್ರೀಯೂ ಸಹ ಎಲ್ಲ ಕಾರ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಶಕ್ತಿ ಉಳ್ಳವಳು ಎಂಬ ಅಂಶ ಮೊದಲು ಆಕೆಗೆ ಮನವರಿಕೆಯಾಗಬೇಕು.
PTI

ಒಟ್ಟಾರೆಯಾಗಿ ಹೇಳುವುದಾದರೆ, ಮಹಿಳೆಯರಿಗೆ ಮೀಸಲಾತಿ ನೀಡಿದರೆ ಮಾತ್ರ ಉದ್ದೇಶ ಸಫಲವಾಗುವುದಿಲ್ಲ. ಅವಳಿಗೆ ಸೂಕ್ತವಾದ ಮಾರ್ಗದರ್ಶನ ನೀಡುವ, ಆತ್ಮವಿಶ್ವಾಸ ಬೆಳೆಸುವ, ಇಚ್ಛಾಶಕ್ತಿಯನ್ನು ವೃದ್ಧಿಸಿಕೊಳ್ಳುವ, ತರಬೇತಿಯ ಒದಗಿಸುವ, ಸಾಧನೆಯ ಕನಸ್ಸನ್ನು ಬಿತ್ತುವ ಕೆಲಸ ಮೊದಲು ಆಗಬೇಕು. ಮೀಸಲಾತಿಯ ಸ್ಥಾನತುಂಬುವ ಕಾರಣಕ್ಕಾಗಿ, ಯಾರದ್ದೋ ಒತ್ತಾಯದ ಮೂಲಕ ಉತ್ಸವ ಮೂರ್ತಿಯಂತೆ ಯಾವುದೇ ಸ್ಥಾನವನ್ನಲಂಕರಿಸುವುದರ ಬದಲಿಗೆ, ಆಕೆಯೊಳಗೆ ಸ್ವಯಂ ಆಸಕ್ತಿ ಮೊಳೆತು, ಆಕೆ ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಾಗ ಅದು ಅರ್ಥವತ್ತಾಗಿರುತ್ತದೆ, ಆಕೆ ತನ್ನ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿ ಅತ್ಯುತ್ತಮ ಗುಣಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯ ಮತ್ತು ಉದ್ದೇಶದ ಸಾಫಲ್ಯ ಗ್ಯಾರಂಟಿ.