ಸ್ತ್ರೀ: ನೋವು ನಲಿವಿನ ನಡುವೆ ಸಾಧನೆಯ ಬದುಕು

ರಜನಿ ಭಟ್
PTI
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ"

ಇದು ಭಾರತೀಯ ಸಂಪ್ರದಾಯವನ್ನು ಬಿಂಬಿಸುವ, ಮಹಿಳೆಯರಿಗೆ ನೀಡಿದ ಸ್ಥಾನಮಾನವೇನೆಂಬುದನ್ನು ಉಲ್ಲೇಖಿಸುವ ಉಕ್ತಿ. ಇದೇ ಕಾರಣಕ್ಕಾಗಿಯೇ ಇರಬಹುದು ಮಹಿಳೆಯನ್ನು ಪ್ರತಿಯೊಂದು ಕುಟುಂಬದಲ್ಲಿ ಗೌರವಾದರಗಳಿಂದ ನೋಡುವುದು. ಅಂದರೆ "ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೊ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ" ಎನ್ನುವ ಪೂಜ್ಯ ಭಾವನೆ ಭಾರತೀಯರಲ್ಲಿ ನೆಲೆಸಿದೆ.

ಆದರೆ ಇಂದಿಗೂ ಮಹಿಳೆ ತನ್ನ ಸ್ವಾತಂತ್ರ್ಯ ಹಾಗೂ ಹಕ್ಕುಗಳಿಗಾಗಿ ಹೋರಾಡುತ್ತಲೇ ಮುಂದುವರಿಯಬೇಕಾಗಿದೆ. ಅದಕ್ಕೊಂದು ಸ್ಪಷ್ಟ ಉದಾಹರಣೆ, ಭಾರತದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಅನುಭವಿಸಿದ ನೋವುಗಳು. ಸ್ವತಃ ಐಪಿಎಸ್ ಅಧಿಕಾರಿಯಾಗಿದ್ದ ಬೇಡಿಯವರನ್ನೇ ಆ ಪುರುಷ ಸಮಾಜ ಲಿಂಗ ತಾರತಮ್ಯದ ಮೂಲಕ ಅಪಮಾನಕ್ಕೆ ಈಡು ಮಾಡಿತ್ತು. ಆ ಕಾರಣಕ್ಕಾಗಿಯೇ ನಿಷ್ಠಾವಂತ ಅಧಿಕಾರಿಯಾಗಿದ್ದ ಬೇಡಿ ಅವರು ಪುರುಷ ಸಮಾಜದ ಲಿಂಗತಾರತಮ್ಯದ ವಿರುದ್ಧ ಸಿಡಿದೆದ್ದು, ತಮ್ಮ ಕೆಲಸಕ್ಕೆ (ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಕ್ಕೆ ಅವರು ನೀಡಿದ ಕಾರಣ ಉನ್ನತ ವ್ಯಾಸಂಗದ ಬಗ್ಗೆ) ರಾಜೀನಾಮೆ ನೀಡುವಂತಾಗಿರುವುದು ದುರಂತವಲ್ಲದೆ ಇನ್ನೇನು ?

ಪುರುಷ ಸಮಾಜ ನಿರಂತರವಾಗಿ ಮಹಿಳೆಯನ್ನು ಶೋಷಣೆಗೆ, ದಬ್ಬಾಳಿಕೆಗೆ ಒಳಪಡಿಸುತ್ತಲೇ ಬಂದಿದೆ. ಆ ಕಾರಣಕ್ಕಾಗಿಯೇ ಇಂದಿಗೂ ಮಹಿಳೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದ್ದು, ಮಹಿಳೆಯರ ಸ್ಥಾನಮಾನ ಸೇರಿದಂತೆ ಆಕೆಯ ರಕ್ಷಣೆ ಕುರಿತಾದ ವಿಚಾರದಲ್ಲಿ ಮತ್ತಷ್ಟು ವಿಮರ್ಶಿಸಬೇಕಾಗಿದೆ.

ಹೆಣ್ಣು ಎಲ್ಲಿಲ್ಲ, ಹೆಣ್ಣಿಗಾಗಿ ಯಾರು ಆತುರ ಪಟ್ಟಿಲ್ಲ, ಹೆಣ್ಣಿಗೋಸ್ಕರ ಯಾರು ಜೀವನವನ್ನೇ ಕೊಟ್ಟಿಲ್ಲ, ಹೆಣ್ಣು ಯಾವ ಕ್ಷೇತ್ರದಲ್ಲಿ ಸಾಧನೆಗೈದಿಲ್ಲ... ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ಇಂದು ಜಗತ್ತಿದೆಯೆಂದರೆ ಅದು ಹೆಣ್ಣಿನಿಂದ. ಯಾಕೆಂದರೆ ಹೆಣ್ಣನ್ನು ಪ್ರಕೃತಿಗೆ ಹೋಲಿಸಿದ್ದಾರೆ. ಪ್ರಕೃತಿಯ ನಾಶ ಸರ್ವನಾಶ ಹೇಗೆಯೋ ಹೆಣ್ಣಿಗೂ ಅದೇ ತರ. ಅದಕ್ಕಾಗಿಯೇ ಹಿರಿಯರು ಹಿಂದೆ ಹೇಳಿದ್ದಾರೆ. ಒಂದು ಹೆಣ್ಣನ್ನು ಗೌರವಿಸಿ, ಪ್ರೀತಿಸಿ, ಆದರಿಸಿ.

ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾಳೆ. ಪುರುಷರಿಗೆ ಆಕೆ ಯಾವುದರಲ್ಲಿ ಸರಿಸಮಾನಳಲ್ಲ? ಹಿಂದಿನ ಕಾಲದಿಂದ ಹಿಡಿದು ಇಂದಿಗೂ ಹೆಣ್ಣು ದುಡಿಯದ ಕ್ಷೇತ್ರವಿಲ್ಲ. ಮೈತ್ರೇಯಿ, ಗಾರ್ಗಿಯಂತಹ ಮಹಿಳೆ ವಿದ್ವತ್ತಿನ ಇನ್ನೊಂದು ಪ್ರತೀಕ. ಮಹಾಭಾರತದ ಕಾಲದಲ್ಲಿ ಕುಂತಿ. ಆಕೆ ತನ್ನ ಮಕ್ಕಳನ್ನು ಸಾಕಿದ ಪರಿ, ಅವರನ್ನು ಯುದ್ಧಕ್ಕೆ ಹುರಿದುಂಬಿಸಿದ ರೀತಿ ನಿಜಕ್ಕೂ ಅದ್ಭುತ. ಸೀತೆ ರಾಮನಿಗಾಗಿ ಕಾದಿದ್ದು, ತಾಳ್ಮೆಯ ಇನ್ನೊಂದು ಪ್ರತೀಕ.

ಇದೆಲ್ಲಾ ಪ್ರಾಚೀನ ಕಾಲವಾಯಿತು. ಮಧ್ಯಮ ಕಾಲದಲ್ಲಿ, ಶಿವಾಜಿಯನ್ನು ಬೆಳೆಸಿದ ಜೀಜಾಬಾಯಿಯ ಸಾಧನೆ ನಿಜಕ್ಕೂ ವರ್ಣಿಸಲಸದಳ. ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಇವರೆಲ್ಲಾ ಈ ದೇಶಕ್ಕಾಗಿ ಹೋರಾಡಿದ ವೀರ ಮಹಿಳೆಯರು.

ND
ಪ್ರಸಕ್ತ ಯುಗದಲ್ಲಿ ಯಾವ ಕ್ಷೇತ್ರದಲ್ಲಿ ಮಹಿಳೆಯಿಲ್ಲ. ಆರುಂಧತಿ ರಾಯ್‌ನಂತಹ ಮಹಿಳೆಯರು ಬರವಣಿಗೆಯ ಮೂಲಕ, ತನ್ನ ನೇರ ನಡೆನುಡಿಯ ಮೂಲಕ ಇಡೀ ವಿಶ್ವದ ಗಮನ ಸೆಳೆದ ನಾರಿ. ಈಕೆಯ ಶೌರ್ಯದ ಮುಂದೆ ಪುರುಷರೆಲ್ಲಿ? ಇನ್ನು ಗಗನದಿಂದಿಳಿಯುತ್ತಲೇ ಅಸ್ತಂಗತರಾದ ಕಲ್ಪನಾ ಚಾವ್ಲಾ ನಮ್ಮೆಲ್ಲರಿಗೂ ಆದರ್ಶ. ಅಂತೆಯೇ, ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ದೀರ್ಘಾವಧಿ ಕಾಲ ನೆಲೆಸಿ ಸಾಧನೆಗೈದ ಮಹಿಳೆ ಎಂಬ ಹೆಗ್ಗಳಿಕೆಯ ಸಾಧನೆಯನ್ನೂ ಮಾಡಿದರು.

ಒಡಿಸ್ಸೀ ನೃತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿದ ಪ್ರೊತಿಮಾ ಬೇಡಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌‌ನ ಪ್ರಥಮ ಮಹಿಳಾ ಅಧ್ಯಕ್ಷೆ ಸರೋಜಿನಿ ದೇವಿ ನಾಯ್ಡು ಸೇರಿದಂತೆ ಅನೇಕ ಮಹಿಳೆಯರ ಸಾಧಕ ಬದುಕಿನ ಹಿಂದೆ ನೋವು-ನಲಿವುಗಳು ತುಂಬಿವೆ ಎನ್ನುವುದನ್ನು ಗಮನಿಸಬೇಕು. ಸರೋಜಿನಿ ನಾಯ್ಡು ಭಾರತದ ಕೋಗಿಲೆಯೆಂದೇ ಬಿರುದುಗಳಿಸಿದ ಇವರ ಸ್ಥಾನವನ್ನು ತುಂಬಲು ಇಂದಿಗೂ ಯಾರಿಗೂ ಸಾಧ್ಯವಾಗಿಲ್ಲ.

ರಾಜಕೀಯ ಕ್ಷೇತ್ರದಲ್ಲೂ ಭಾರತೀಯ ನಾರಿ ಹಿಂದುಳಿದಿಲ್ಲ. ಇಂದಿರಾ ಗಾಂಧಿಯಿಂದ ಹಿಡಿದು, ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್, ಮಾಯಾವತಿ, ಎಲ್ಲೆಲ್ಲೂ ಮಹಿಳೆಯರೇ. ದೇಶದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಭಾಜನರಾದವರು ಪ್ರತಿಭಾ ಪಾಟೀಲ್. ಕಂಪ್ಯೂಟರ್ ಕ್ಷೇತ್ರದಲ್ಲಿ ಸುಧಾಮೂರ್ತಿಯಂತಹ ಸಾಫ್ಟ್‌ವೇರ್ ಮಹಿಳೆಯನ್ನು ಮೀರಿಸುವವರಿಲ್ಲ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಪ್ರತಿಭೆಯಿಂದ ಉನ್ನತ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ.

ಮಹಿಳೆಗೆ ಹಿಂದಿನಿಂದಲೂ ಗೌರವ ಬಹಳ ಇತ್ತು. ಆಕೆಯನ್ನು ಪೂಜ್ಯ ಭಾವನೆಯಿಂದ ನೋಡುತ್ತಲೂ ಇದ್ದರು. ಪ್ರತಿಯೊಂದು ಮಗುವು ಜನಿಸಿದ ತಕ್ಷಣ ಹೇಳುವ ಮೊದಲ ಮಾತೇ 'ಅಮ್ಮ'. ಹೀಗಾಗಿ ಮಾತೆಗೆ ಮೊದಲ ಸ್ಥಾನ. ಮಾತೃದೇವೋಭವ ಎನ್ನುವುದು ಇದಕ್ಕೆ. ಈ ಕಾರಣಗಳಿಂದಲೇ ಆಕೆಯನ್ನು ಗೌರವಾದರಗಳಿಂದ ನೋಡುತ್ತಾರೆ. ಅದಕ್ಕಾಗಿಯೇ ಹಿರಿಯರು, ಒಂದು ಹೆಣ್ಣು ಬಾಲ್ಯದಲ್ಲಿ ಅಪ್ಪನ ರಕ್ಷಣೆಯಲ್ಲಿ, ನಂತರ ಪತಿಯ ರಕ್ಷಣೆಯಲ್ಲಿ ಮತ್ತು ಕೊನೆಗೆ ಮಗನ ರಕ್ಷಣೆಯಲ್ಲಿ ಇರಬೇಕೆಂಬ ಮುನ್ನುಡಿಯನ್ನೇ ಹೇಳಿದ್ದಾರೆ. ಇದು ನಾರಿಯ ಬಗ್ಗೆ ಇರುವ ಕಾಳಜಿಯನ್ನು ಸೂಚಿಸುತ್ತದೆ.

ಪ್ರಾಚೀನ ಭಾರತೀಯ ಸಮಾಜದಲ್ಲೂ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿದ್ದಳು. ಆದರೆ ಪುರುಷ ಸಮಾಜ ನಂತರದ ದಿನಗಳಲ್ಲಿ ಮಹಿಳೆಗೆ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸುವ ಮೂಲಕ ತಮ್ಮ ದಾಳಕ್ಕೆ ತಕ್ಕಂತೆ ಉರುಳಿಸಲು ಬಳಸಿಕೊಂಡರು. ಕಾಲಚಕ್ರ ಉರುಳಿದಂತೆ, ವರದಕ್ಷಿಣೆ, ಬಾಲ್ಯವಿವಾಹ ಮುಂತಾದ ಭಯಾನಕ ಪದ್ಧತಿಗಳೂ ಬಂದವು. ಆದರೆ ಇಂದು ಮಹಿಳೆ ಮತ್ತೆ ಹೊರಬರುತ್ತಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಸರಿಸಮಾನವಾಗಿ ಮುಂದುವರಿಯುತ್ತಿದ್ದಾಳೆ.

ಇಷ್ಟೆಲ್ಲಾ ಆದರೂ ಮಹಿಳೆಯರ ಸ್ಥಿತಿಗತಿಗಳು ಇನ್ನೂ ಸುಧಾರಿಸಿಲ್ಲ . ಎಲ್ಲಾ ಕಡೆ ಮಹಿಳಾ ಮೀಸಲಾತಿಗಾಗಿನ ಹೋರಾಟ ಕೊನೆಗಾಣುತ್ತಿಲ್ಲ. ಹೆಣ್ಣು ಬೆಳೆಯುತ್ತಿರುವಂತೆಯೇ, ವರದಕ್ಷಿಣೆಯ ಕಾಟ. ಈ ಕಾರಣಕ್ಕಾಗಿ ಹೆಣ್ಣು ಭ್ರೂಣ ಹತ್ಯೆ. ಹೀಗೆ ಸಮಾಜದಲ್ಲಿ ಹೆಣ್ಣಿಗಿರುವ ನೋವುಗಳ ಸಂಖ್ಯೆ ಅಪಾರ. ಯಾವ ಕ್ಷೇತ್ರದಲ್ಲೇ ಆಗಲಿ ಆಕೆಗೆ ಸಿಗಬೇಕಾದ ಗೌರವಾದರಗಳು ಸಿಗುತ್ತಿಲ್ಲ. ಎಷ್ಟೇ ಸಾಧನೆಗೈದರೂ ತಮ್ಮ ಸೃಷ್ಟಿಗೆ ಹೆಣ್ಣೇ ಕಾರಣ ಎಂದು ತಿಳಿಯದವರು ಹೆಣ್ಣು ಎಂಬ ಕಾರಣಕ್ಕೆ ಆಕೆಯನ್ನು ಕೀಳಾಗಿ ನೋಡುತ್ತಿದ್ದಾರೆ. ಹೆಣ್ಣೆಂಬ ಕಾರಣಕ್ಕಾಗಿ ಆಕೆ ಪಡಬೇಕಾದ ಪಾಡು ಪಡಲೇಬೇಕು. ಅಂತಹ ಸ್ಥಿತಿ ಅಲ್ಲಲ್ಲಿದೆ.

ವರ್ಷ ವರ್ಷವೂ ಮಹಿಳಾ ದಿನ ಬರುತ್ತಲೇ ಇದೆ. ಆದರೆ ಮಹಿಳೆಯರ ದಿನಕ್ಕಾಗಿ ಏನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ? ಆಕೆಯ ಸ್ಥಿತಿಗತಿಗಳ ಬಗ್ಗೆ ಎಷ್ಟು ಅವಲೋಕನವನ್ನು ಮಾಡಲಾಗಿದೆ ಎನ್ನುವುದೂ ಮುಖ್ಯ. ಇಂದಿಗೂ ಮಹಿಳೆ ನಾನಾ ಕಷ್ಟ ಕಾರ್ಪಣ್ಯಗಳ ನಡುವೆ ಒದ್ದಾಡುತ್ತಿದ್ದಾಳೆ. ಸಮಾಜ ಇಂದಿಗೂ ಆಕೆಯನ್ನು ಹುರಿದುಂಬಿಸುವ ಬದಲುಅಬಲೆಯೆಂದೇ ಪರಿಗಣಿಸುತ್ತಿದ್ದಾರೆ.

ಆದ್ದರಿಂದ ಭಾರತೀಯ ದಿಟ್ಟ ಮಹಿಳೆಯರೇ ಎದ್ದೇಳಿ. ಎಚ್ಚೆತ್ತುಕೊಳ್ಳಿ. ನಮ್ಮ ಕ್ಷೇತ್ರ ಇನ್ನೂ ಮುಂದುವರಿಯಬೇಕು. ಅದಕ್ಕಾಗಿ ನಾವು ಸಾಧನೆಯ ಪಥದಲ್ಲಿ ಮುನ್ನುಗ್ಗಬೇಕು. ಇದಕ್ಕಾಗಿ ಒಗ್ಗೂಡಿ ಬನ್ನಿ. ನಮ್ಮ ಹಕ್ಕುಗಳಿಗಾಗಿ ಹೋರಾಡೋಣ...