ಹಲವು ಜವಾಬ್ದಾರಿ ನಿಭಾಯಿಸಬಲ್ಲ ಆಧುನಿಕ ಮಹಿಳೆ

ರಜನಿ ಭಟ್
PTI
ಮುಂಜಾನೆಯ ಗಡಿಬಿಡಿ, ಆತುರದಲ್ಲಿ ಅಡುಗೆ, ಮಕ್ಕಳ ಶಾಲೆಯ ಜವಾಬ್ದಾರಿ, ತರಾತುರಿಯಲ್ಲಿ ತಿಂಡಿ, ಹೆಗಲ ಮೇಲೊಂದು ಬ್ಯಾಗು, ಸುರ್ರ್ ಎಂದು ಹೊರಟಿತು ಗಾಡಿ. ಮತ್ತೆ ಮುಖದಲ್ಲೊಂದು ನಗೆ, ನಗುಮುಖದ ವ್ಯವಹಾರ, ನಗು, ನೋವು ನಲಿವುಗಳ ಹಂಚಿಕೆ, ಮತ್ತೆ ಧಾವಂತದಲ್ಲಿ ಮನೆಗೆ, ಕುಟುಂಬ ಪ್ರತಿನಿಧಿಗಳ ಸೇವೆ, ಒಟ್ಟಿನಲ್ಲಿ ಒಂದು ನಿಮಿಷವೂ ಯೋಚನೆ ಮಾಡಲಾಗದ ತರಾತುರಿಯಲ್ಲಿ ನಗುಮುಖದೊಂದಿಗೆ ಕಳೆಯುವ ದಿನ.

ಇದೇನಿದು ಗೊಂದಲ... ಒಂದೂ ತಿಳಿಯುತ್ತಿಲ್ಲ ಅಲ್ಲವೇ. ಇದು ನಮ್ಮ ಆಧುನಿಕ ಮಹಿಳೆಯ ದಿನಚರಿ. ಇತ್ತ ಕಡೆ ಕಚೇರಿ, ಸಾಮಾಜಿಕ ಸೇವೆ, ಅತ್ತ ಕಡೆ ಕುಟುಂಬ, ಮಕ್ಕಳ ಉಪಚಾರ, ಹಬ್ಬ ಹರಿದಿನಗಳ ಸಂಭ್ರಮ . ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಜಾಣತನ. ಯಾರದಿರಬಹುದು ಈ ಚಮತ್ಕಾರ. ನೀವು ಊಹಿಸಬಹುದಲ್ಲವೇ.

ಹೌದು. ನಮ್ಮ ಮಹಿಳೆಯರು ಹಿಂದಿನಂತಿಲ್ಲ. ಮುಂದುವರಿದಿದ್ದಾರೆ. 'ವಿದ್ಯೆ ಕಲಿತ ನಾರಿ ದೇಶಕ್ಕೆ ದಾರಿ' ಎಂಬಂತೆ ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ವೈಜ್ಞಾನಿಕ ಕ್ಷೇತ್ರವೇ ಇರಲಿ, ಸಾಮಾಜಿಕ ಅಥವಾ ಕಲೆ ಸಾಹಿತ್ಯ ರಂಗಭೂಮಿ ಯಾವುದೇ ಇರಲಿ ಮಹಿಳೆಯರದ್ದೇ ದರ್ಬಾರು. ಇಂದು ದೇಶದಲ್ಲಿ ಆರ್ಥಿಕತೆಯ ಮಟ್ಟ ಸುಧಾರಣೆಯಾಗಿದೆಯೆಂದರೆ ಅದರಲ್ಲಿ ಅರ್ಧ ಶತಾಂಶದಷ್ಟು ಪಾಲು ಮಹಿಳೆಯರದ್ದೇ ಎಂದರೆ ಯಾವ ತಪ್ಪೂ ಆಗಲಿಕ್ಕಿಲ್ಲ.

ಇಪ್ಪತ್ತೊಂದನೇ ಶತಮಾನದ ವೈಶಿಷ್ಟ್ಯ ಎಂದರೆ ಕಂಪ್ಯೂಟರ್. ಈ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅದ್ಭುತ. ಪ್ರಸಕ್ತ ಅವಧಿಯಲ್ಲಿ ಒಂದು ಮಹಿಳೆ ಮನೆಯ ಹೊರಗೆ ಹೋಗಿ ವ್ಯವಹರಿಸಬೇಕಾಗಿಲ್ಲ. ಇಂದು ಆಧುನಿಕತೆಯ ಮಟ್ಟ ಎಷ್ಟು ಸುಧಾರಿಸಿದೆಯೆಂದರೆ ಒಬ್ಬ ಮಹಿಳೆ ತನ್ನ ಮನೆ ಜವಾಬ್ದಾರಿಗಳ ಜೊತೆಗೆ ಕಂಪ್ಯೂಟರ್ ಮೂಲಕ ವ್ಯವಹಾರವನ್ನು ನಿಭಾಯಿಸಿ ಮುಂದುವರಿಯುವಂತಾಗಿದೆ. ಇಷ್ಟೇ ಅಲ್ಲ ಕುಳಿತಲ್ಲಿಂದಲೇ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಪುರುಷರಿಗಿಂತಲೂ ಹೆಚ್ಚು ಅಚ್ಚುಕಟ್ಟಾಗಿ ಹೊರಗಿನ ವ್ಯವಹಾರಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಇಂದು ಮಹಿಳೆ ಪಡೆದಿದ್ದಾಳೆ.

ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಸ್ವತಂತ್ರ ರೀತಿಯಲ್ಲಿ ಮನೆಯಿಂದ ಹೊರಗೆ ಹೋಗಿ ವ್ಯವಹಾರ ನಡೆಸುವುದು ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಂತ ಕಷ್ಟವೇ ಆಗಿತ್ತು. ಆದರೆ ಕಂಪ್ಯೂಟರ್ ಯುಗವು ಆಕೆಗೆ ಪ್ರತಿಯೊಂದು ವಿಷಯಗಳ, ಸೂಕ್ಷ್ಮಾತಿಸೂಕ್ಷ್ಮಗಳ ವಿವರಣೆ ನೀಡುವುದರೊಂದಿಗೆ ಆಕೆಯನ್ನು ಮನೆಯೆಂಬ ಒಳಪ್ರಪಂಚದಿಂದ ಹೊರಪ್ರಪಂಚಕ್ಕೆ ಕರೆದೊಯ್ದಿದೆ. ತಾನು ಅಬಲೆಯಲ್ಲ ತನ್ನಲ್ಲೂ ಶಕ್ತಿ ಇದೆ ಎಂದು ತೋರಿಸಿಕೊಡುವ ಮನಸ್ಥೈರ್ಯವನ್ನು ಇದು ಆಕೆಗೆ ತಂದುಕೊಟ್ಟಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕಂಪ್ಯೂಟರ್ ಯುಗವು ಕಾಲಿಟ್ಟ ಕ್ಷಣದಿಂದ ಮಹಿಳೆಯು ಮುಕ್ತವಾಗಿ ದುಡಿಯಲಾರಂಭಿಸಿದ್ದಾಳೆ.

ಹಿಂದಿನ ಸಮಾಜದಲ್ಲಿ ಮಹಿಳೆಗೆ ಪ್ರಪಂಚ ಜ್ಞಾನವಿರಲಿಲ್ಲ. ಹೊರಗಿನ ಆಗುಹೋಗುಗಳ ಬಗ್ಗೆ ಮಾಹಿತಿಯಂತೂ ಮೊದಲೇ ಇರಲಿಲ್ಲ. ಒಬ್ಬರನ್ನು ಧಿಕ್ಕರಿಸಿ ತನ್ನ ಮಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಂತೂ ಬಹುದೂರದ ಮಾತು. ಅಂತಹ ಮಹಿಳೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಾಳತ್ವವನ್ನು ತೆಗೆದುಕೊಂಡು ಎಲ್ಲಾ ಜವಾಬ್ಧಾರಿಗಳನ್ನು ನಿಭಾಯಿಸುವಲ್ಲಿ ಸಮರ್ಥಳಾಗಿದ್ದಾಳೆ. ಇದರೆ ಹಿಂದೆ ಮಾಹಿತಿ ತಂತ್ರಜ್ಞಾನದ ಪ್ರಗತಿಯ ಉದಾರ ಕೊಡುಗೆಯೂ ಇದೆ.

ಇಂದು ಮಹಿಳೆಗೆ ಮನೆಯೊಂದೇ ಪ್ರಪಂಚ ಅಲ್ಲ. ಪ್ರತಿಯೊಂದು ಪುರುಷನ ಯಶಸ್ಸಿನ ಹಿಂದೆ ಒಂದು ಮಹಿಳೆ ಇರುತ್ತಾಳೆ. ಈ ಮಾತು ಇಂದಿನ ಯುಗಕ್ಕಂತೂ ಅಕ್ಷರಶಃ ಸತ್ಯ. ಇಂದಿನ ಮಹಿಳೆ ತನ್ನ ಜೀವನ ಸಂಗಾತಿ ಇರಲಿ, ಅಥವಾ ಸಹೋದರರೇ ಇರಲಿ ಅವರನ್ನು ಮುಂದುವರಿಯಲು ಪ್ರೋತ್ಸಾಹಿಸುವುದರ ಜೊತೆಗೆ ತನ್ನ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರನ್ನು ಉತ್ತಮ ದಾರಿಯಲ್ಲಿ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾಳೆ.

ಆದ್ದರಿಂದ ಆಧುನಿಕ ಮಹಿಳೆಯರೇ, ನೀವು ಅಬಲೆಯರೆಂದು ತಿಳಿದುಕೊಳ್ಳಬೇಡಿ. ನಾವೆಲ್ಲರೂ ಪ್ರಬಲರಾಗಿದ್ದೇವೆ. ನಮ್ಮಲ್ಲೂ ಸಾಮರ್ಥ್ಯವಿದೆ. ಯಾವ ಕ್ಷೇತ್ರದಲ್ಲೂ ಮುಂದುವರಿಯಲು ನಾವು ಶಕ್ತರಾಗಿದ್ದೇವೆ ಎಂದು ತೋರಿಸಿಕೊಡೋಣ. ಪ್ರತಿ ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನರಾಗಿಯೇ ಇರೋಣ.