ಯೋಗದ ಸುತ್ತ ಒಂದು ಸುತ್ತು

ಮೈ ಮನಸ್ಸುಗಳಿಗೆ ಕಡಿವಾಣ ಹಾಕಿ ಸುಸ್ತಿಯಲ್ಲಿಡುವ ಶಕ್ತಿ ಇರುವುದು ಯೋಗಕ್ಕೆ. ಯೋಗ ಎಂಬ ಶಬ್ದವು ಸಂಸ್ಕೃತ ಶಬ್ದ 'ಯುಜ್.....' ಅಂದರೆ, ಬಂಧಿಸು, ಸೇರಿಸು, ಅಡಕ, ಕೇಂದ್ರೀಕರಣ ಬಂಧನ, ಬಳಕೆ ಮತ್ತು ಅಳವಡಿಕೆಯ ನಿರ್ದೇಶನ, ಸಂಘ ಅಥವಾ ಸಂಪರ್ಕದ ಅರ್ಥವನ್ನೂ ನೀಡುತ್ತದೆ.

ಯೋಗವು ಮಾನವನ ವಿವಿಧ ಸ್ವಾಭಾವಿಕ ಶಕ್ತಿ, ಮನದ ಭಾವನೆಗಳು, ದೇಹ ಮತ್ತು ಸ್ಫೂರ್ತಿಯ ಸಮಗ್ರತೆ ಮತ್ತು ಸೌಹಾರ್ದತೆ. ಮನೋನಿಗ್ರಹ, ಮನಶಾಂತಿ ಮತ್ತು ಬದುಕಿನ ಒತ್ತಡವನ್ನು ಕುಗ್ಗಿಸಲು ಇದು ಸಹಾಯಕ.

ಯೋಗವು ಆಧ್ಯಾತ್ಮಿಕ ಹಾದಿಯಾಗಿದ್ದು ಈ ಮೂಲಕ ವ್ಯಕ್ತಿಯು ತನ್ನ ಗಮ್ಯವನ್ನು ತಲುಪಬಹುದಾಗಿದೆ. ತನ್ನ ಗುರಿಯನ್ನು ತಲುಪಲು ವ್ಯಕ್ತಿಯು ನಿಸ್ಸಂಶಯವಾಗಿಯೂ ತನ್ನ ಪಥಸೂಚನೆಯನ್ನು ಅರ್ಪಣಾಪೂರ್ವಕವಾಗಿ ಅನುಸರಿಸಬೇಕು. ಆರೋಗ್ಯಕರ ಜೀವನ ಕ್ರಮ, ನೈತಿಕ ಹಾಗೂ ಸ್ವ ನಿಯಂತ್ರಣ ಈ ಮಾರ್ಗದ ಸೂಚಕಗಳು.

ಇವುಗಳ ಒಟ್ಟಾರೆ ಫಲವು ಮೋಹಕವಾದುದು. ಈ ಎಲ್ಲ ನಿಯಂತ್ರಣಗಳನ್ನು ಯಾರು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಾರೋ ಅವರು ಖಂಡಿತವಾಗಿಯೂ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಬದಲಾಗಿ ಇದು ಆತನ ಆಧ್ಯಾತ್ಮಕ ಶಕ್ತಿಯನ್ನು ಮರುಸ್ಥಾಪಿಸುತ್ತದೆ. ಮನಸ್ಸು ಮತ್ತು ಸ್ಫೂರ್ತಿ ಸೌಹಾರ್ದವಾಗಿದ್ದರೆ, ದೇಹವೂ ತನ್ನ ಹಿಡಿತದಲ್ಲಿರುತ್ತದೆ.

ಯೋಗಾಭ್ಯಾಸ ಅಳವಡಿಸಿಕೊಂಡಿರುವ ವ್ಯಕ್ತಿ ತನ್ನ ಮನೋಭಾದಲ್ಲಿ ಧನಾತ್ಮಕ, ಹಾಗೂ ಮೂಲರೂಪದ ಸ್ಥಿತ್ಯಂತರವನ್ನು ಕಾಣುತ್ತಾನೆ. ಇದು ಆತನ ಬದಲಾದ ಜೀವನ ಕ್ರಮದಮೇಲೆ ಖಂಡಿತವಾಗಿಯೂ ಪರಿಣಾಮವನ್ನು ಬೀರುತ್ತದೆ.

ಯೋಗದ ಆಧಾರಗಳು
ಯೋಗವು ಪ್ರಮುಖವಾಗಿ ಎರಡು ಆಧಾರಗಳನ್ನು ಹೊಂದಿದೆ. ಅವುಗಳು ದೈಹಿಕ ಮತ್ತು ಆಧ್ಯಾತ್ಮಿಕ. ದೈಹಿಕವೆಂದರೆ ನಾಲ್ಕು ಮುದ್ರೆಗಳೊಂದಿಗೆ, ಕ್ರಿಯೆ, ಆಸನ, ಬಂಧ ಮತ್ತು ಪ್ರಾಣಾಯಮಗಳು. ಇವುಗಳ ಸೂಕ್ತ ಅಭ್ಯಾಸವು ಆಧ್ಯಾತ್ಮ ಉನ್ನತಿಗಾಗಿ ದೇಹ ಮತ್ತು ಮನಸ್ಥಿತಿಗಳನ್ನು ಚೆನ್ನಾಗಿರಿಸುತ್ತವೆ. ಆಧ್ಯಾತ್ಮಿಕ ದರ್ಶನವು ಸ್ವ-ಅರಿವು ಮತ್ತು ಮಾನಸಿಕ ನಿಯಂತ್ರಣ ಅಥವಾ ಮನೋ ನಿಗ್ರಹವಾಗಿದೆ. ಯೋಗ ಗುರುವೊಬ್ಬರು ಈ ಸ್ವಾಭಾವಿಕ ಶಕ್ತಿಗಳ ಸಜೀವ ಮೂರ್ತರೂಪ.

ಈ ವಾಹಿನಿಯ ಮೂಲಕ ನಾವು 30 ಆಸನಗಳಿಗಿಂತಲೂ ಹೆಚ್ಚಿನ ಆಸನಗಳನ್ನು ಹಂತಹಂತವಾಗಿ ಪರಿಚಯಿಸಲಿದ್ದೇವೆ. ಪ್ರತೀ ವಾರ ನೀವು ಹೊಸಹೊಸ ಆಸನಗಳ ಬಗ್ಗೆ ಮಾಹಿತಿ ಪಡೆಯಲಿದ್ದೀರಿ. ಬನ್ನಿ.... ಆರೋಗ್ಯಕರ ಜಗತ್ತಿನತ್ತ ಪ್ರಯಾಣ ಬೆಳೆಸೋಣ.

ವೆಬ್ದುನಿಯಾವನ್ನು ಓದಿ