ಹಲಾಸನ

ವಿಪರೀತ ಕರಣಿ ಮತ್ತು ಸರ್ವಾಂಗಸನದ ಮೇಲೆ ಪ್ರಭುತ್ವ ಸಾಧಿಸಿದ್ದರೆ ಮಾತ್ರ ನೀವು ಹಲಾಸನದ ಅಭ್ಯಾಸ ನಡೆಸಬೇಕು. ಹಲಾಸನವು ಪಶ್ಚಿಮೋತ್ತಾಸನಕ್ಕೆ ಪೂರಕವಾದುದು. ಚಕ್ರಾಸನ ಮತ್ತು ಮತ್ಸ್ಯಾಸನಗಳು ಹಲಾಸನದ ವಿರುದ್ಧ ಭಂಗಿಯ ಆಸನ.

ಸಂಸ್ಕೃತದ 'ಹಲ' ಮತ್ತು 'ಆಸನ' ಎಂಬೆರಡು ಶಬ್ದಗಳು ಸೇರಿ ಹಲಾಸನ ರೂಪುಗೊಂಡಿದೆ. ಹಲ ಎಂದರೆ ನೇಗಿಲು ಎಂದೂ, ಆಸನ ಎಂದರೆ ಯೋಗಭಂಗಿ ಎಂದೂ ಅರ್ಥ. ಹಾಗಾಗಿ ಹಲಾಸನದ ವೇಳೆ ಯೋಗಿಯ ದೇಹವು ಭಾರತೀಯ ಸಾಂಪ್ರದಾಯಿಕ ನೇಗಿಲಿನ ಆಕಾರದಂತಾಗುವ ಕಾರಣ ಇದಕ್ಕೆ ಹಲಾಸನ ಎಂಬ ಹೆಸರು.

ವಿಧಾನ
ಹಲಾಸನ ಅಭ್ಯಾಸ ಆರಂಭದ ಅತ್ಯುತ್ತಮ ವಿಧಾನವೆಂದರೆ, ಅರ್ಧ ಹಲಾಸನ ಭಂಗಿಯಿಂದ ಆರಂಭ. ಆದರೆ ನೀವು ನಿಮ್ಮ ಕೈಗಳ ಮೇಲೆ ಯಾವುದೇ ಒತ್ತಡ ಹಾಕಬೇಕಿಲ್ಲ. ನೀವು ನಿಮ್ಮ ಅಂಗೈಗಳನ್ನು ನೆಲಕ್ಕೆ ಊರುವ ವೇಳೆಯೂ ನಿಧಾನಕ್ಕೆ ಉಸಿರುಬಿಡಿ. ಏಕಕಾಲಕ್ಕೆ ನಿಮ್ಮ ಬೆನ್ನು, ಸೊಂಟ ಮತ್ತು ನಿತಂಬವನ್ನು ನೆಲದಿಂದ ಮೇಲಕ್ಕೆತ್ತಿ. ಅದೇ ವೇಳೆ ನಿಧಾನಕ್ಕೆ, ಆದರೆ ಒಂದೇ ನಡೆಯಲ್ಲಿ ನಿಮ್ಮ ಕಾಲುಗಳನ್ನು ಮೊಣಕಾಲುಗಳನ್ನು ಬಗ್ಗಿಸದೆ ನಿಮ್ಮ ತಲೆಯ ಮೇಲಕ್ಕೆ ತನ್ನಿ. ನೇರವಾದ, ಭಾಗದ ನಿಮ್ಮ ಕಾಲುಗಳನ್ನು ತಲೆಯಿಂದ ಆಚೆಗೆ ಕಾಲ್ಬೆರಳುಗಳು ನೆಲಕ್ಕೆ ಮುಟ್ಟುವಂತೆ ಭಾಗಿಸಿ. ಕಾಲ್ಬೆರಳುಗಳು ನಿಮ್ಮ ತಲೆಯಿಂದ ಆಚೆಗೆ ಹತ್ತಿರದ ಬಿಂದುವಿಗೆ ತಾಕುತ್ತಿರಬೇಕು. ಉಸಿರನ್ನು
WD
ಒಳಗೆಳೆದುಕೊಂಡು ಸಹಜವಾಗಿ ಉಸಿರಾಡಿ. ನಿಧಾನಕ್ಕೆ ಕಾಲ್ಬೆಳುಗಳನ್ನು ಒಟ್ಟಿಗೆ ನೆಲದ ಮೇಲೆ ಇನ್ನು ಜಾರಿಸಿ. ಸಾಧ್ಯವಾದಷ್ಟು ಬೆನ್ನನ್ನು ಸುರುಳಿ ಮಾಡಿ. ನಿಮ್ಮ ಗಲ್ಲವನ್ನು ಎದೆಗೆ ಒತ್ತಿ. ಈಗ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ಅವುಗಳನ್ನು ನಿಧಾನವಾಗಿ ನಿಮ್ಮ ತಲೆಗಳ ಎರಡೂ ಪಕ್ಕದಲ್ಲಿ ಇರಿಸಿ. ನಿಮ್ಮ ಕೈಬೆಳುಗಳನ್ನು ಪರಸ್ಪರ ಬಂಧಿಸಿ ನಿಮ್ಮ ತಲೆಯು ಅದರಿಂದ ಆವೃತವಾಗುವಂತೆ ಇರಿಸಿ. ಇಷ್ಟೂ ಹೊತ್ತು ನಿಮ್ಮ ಕಾಲುಗಳು ಜೋಡಿಸಿದಂತೆ ನೆಟ್ಟಗಿರಬೇಕು. ಸಹಜವಾಗಿ ಉಸಿರಾಡುತ್ತಿರಿ. ಆರಂಭದ ಹಂತದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಅಥವಾ ನಿಮಗೆ ಆಹಿತವೆನಿಸುವ ತನಕ ಈ ಭಂಗಿಯಲ್ಲಿರಿ.


ಆರಂಭದ ಭಂಗಿಗೆ ಮರಳುವಿಕೆ
ನಿಮ್ಮ ಕೈಗಳನ್ನು ನಿಧಾನಕ್ಕೆ ಬಿಡಿಸಿ ಅವುಗಳು ಮೊದಲಿದ್ದ ಜಾಗದಲ್ಲಿ ನಿಮ್ಮ ದೇಹದ ಇಕ್ಕೆಲಗಳಲ್ಲಿರಿಸಿ. ನಿಧಾನಕ್ಕೆ ಉಸಿರು ಒಳಗೆಳೆದುಕೊಳ್ಳಿ. ಏಕಕಾಲಕ್ಕೆ ಮೊಣಕಾಲುಗಳನ್ನು ಬಗ್ಗಿಸದೆಯೇ ನಿಮ್ಮ ಕಾಲುಗಳನ್ನು ಲಂಬಕೋನ ಸ್ಥಿತಿಗೆ ತನ್ನಿ. ಕಾಲುಗಳನ್ನು ನೆಲದಮೇಲಿನ ಪೂರ್ವಸ್ಥಿತಿಗೆ ಮರಳಿಸುವ ವೇಳೆ ನಿಮ್ಮ ಕಿಬ್ಬೊಟ್ಟೆಯ ಮಾಂಸ ಖಂಡಗಳ ಮೇಲೆ ಪ್ರಮುಖವಾಗಿ ಒತ್ತಡ ಬೀಳುತ್ತದೆ. ಈ ಲಂಭಕೋನ ಸ್ಥಿತಿಯಲ್ಲಿ ಎರಡು ಸೆಕುಂಡುಗಳ ಕಾಲವಿರಿ. ಉಸಿರನ್ನು ಹೊರಬಿಡುತ್ತಾ ನಿಮ್ಮ ಕಾಲುಗಳನ್ನು ನೆಲಕ್ಕೆ ಮರಳಿಸಿ, ನಿಮ್ಮ ಹಿಮ್ಮಡಿಗಳು ನೆಲಕ್ಕೆ ತಾಕುವವೇಳೆ ಉಸಿರಿನ ಹೊರಹಾಕುವಿಕೆ ಸಂಪೂರ್ಣಗೊಳ್ಳಲಿ. ಬಳಿಕ ಎರಡು ಸೆಕುಂಡುಗಳು ತಡೆದ ನಂತರ ಸಹಜ ಓಘದಲ್ಲಿ ಉಸಿರಾಟ ನಡೆಸಿ.

ಎಚ್ಚರಿಕೆ
ಗರ್ಭಾವಸ್ಥೆ ಮತ್ತು ಋತುಸ್ರಾವ ಸಮಯದಲ್ಲಿ ಈ ಆಸನದ ಅಭ್ಯಾಸ ಮಾಡಲೇ ಬಾರದು. ಕಿಬ್ಬೊಟ್ಟೆ ಭಾಗದಲ್ಲಿ ನೋವಿದ್ದರೆ, ಅಥವಾ ಅಭ್ಯಾಸ ಮಾಡುವ ವೇಳೆಗೆ ಗುಲ್ಮ ಮತ್ತು ಪಿತ್ತಕೋಶದಲ್ಲಿ ನೋವು ಸಂಭವಿಸಿದರೆ ಆಭ್ಯಾಸವನ್ನು ತಕ್ಷಣ ನಿಲ್ಲಿಸಿ. ಹೃದಯದ ತೊಂದರೆ, ತೀವ್ರ ರಕ್ತದೊತ್ತಡ ಮತ್ತು ಹರ್ನಿಯ ಸಮಸ್ಯೆಯವರಿಗೂ ಇದು ಸೂಕ್ತವಲ್ಲ. ಹಲಾಸನದ ಅಭ್ಯಾಸದ ವೇಳೆಗೆ ಉಸಿರಾಟದ ಲಯವನ್ನು ಅನುಸರಿಸಿ.

ಉಪಯೋಗಗಳು
ಹಲಾಸನವು ಲೈಂಗಿಕ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ನಿಮ್ಮ ಪೆಲ್ವಿಕ್ ಮತ್ತು ಕಿಬ್ಬೊಟ್ಟೆಯ ಅಂಗಾಂಗಗಳ ಬಲವರ್ಧನೆಗೊಳ್ಳುತ್ತವೆ. ಮಿಗಿಲಾಗಿ ಅವುಗಳ ಪರಿಸ್ಥಿತಿಗಳನ್ನು ಸರಿಯಾಗಿಸುತ್ತದೆ. ಹಲಾಸನದ ನಿಯಮಿತ ಅಭ್ಯಾಸವು ದೇಹಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಉದಾಸೀನ ಮತ್ತು ಜಡತ್ವನ್ನು ಹೋಗಲಾಡಿಸುತ್ತದೆ. ಬೊಜ್ಜು ಕರಗಿಸಿ ದೇಹಕ್ಕೆ ಉತ್ತಮ ಆಕಾರ ನೀಡುತ್ತದೆ. ಕಿಬ್ಬೊಟ್ಟೆ ಮತ್ತು ಸೊಂಟದ ಭಾಗಗಳು ತೆಳ್ಳಗಾಗುತ್ತವೆ. ಸೊಂಟ, ನಿತಂಬ, ತೊಡೆ ಹಾಗು ಕಿಬ್ಬೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ಕಾಲು ಮತ್ತು ಪೆಲ್ವಿಕ್ ಭಾಗಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಅಂತೆಯೇ ಗಂಟಲು ನಿರಾಳವಾಗುತ್ತದೆ. ಹಾಗಾಗಿ ಸಂಗೀತಗಾರರು ಮತ್ತು ಶಿಕ್ಷಕರು ಈ ಆಸನದ ನಿರಂತರ ಅಭ್ಯಾಸದಿಂದ ವಿಶೇಷ ಅನುಕೂಲ ಪಡೆಯಬಹುದಾಗಿದೆ.

ಹಲಾಸನದ ಅಭ್ಯಾಸದಿಂದ ಕತ್ತಿನ ಮಾಂಸಪೇಶಿಗಳಿಗೂ ಉತ್ತಮ ವ್ಯಾಯಾಮ ದೊರಕಿ ಅವುಗಳು ಸುದೃಢಗೊಳ್ಳುತ್ತವೆ. ಥೈರಾಯಿಡ್ ಮತ್ತು ಪ್ಯಾರಾಥೈರಾಯಿಡ್ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ನಿಮ್ಮ ಮುಖ ಹಾಗೂ ಮೆದುಳಿಗೆ ಉತ್ತಮ ರಕ್ತಸಂಚಾರವಾಗುತ್ತದೆ. ಲಿವರ್ ಮತ್ತು ಗುಲ್ಮದ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಬೆನ್ನುಹುರಿಯ ಸಣ್ಣಪುಟ್ಟ ಸಮಸ್ಯೆಗಳು ಸರಿಯಾಗುತ್ತವೆ. ಹೃದಯದ ಮಾಂಸಖಂಡಗಳಮೇಲೆ ಬದಲೀ ಒತ್ತಡ ಬೀಳುವುದರಿಂದ ಹೃದಯವು ಸುದೃಢವಾಗುತ್ತದೆ. ದೇಹದ ರಕ್ತಪರಿಚಲನೆ ಹೆಚ್ಚುತ್ತದೆ. ಹಲಾಸನದ ವೇಳೆಗೆ ದೇಹದ ಹೆಚ್ಚಿನೆಲ್ಲ ಭಾಗಗಳಿಗೆ ವ್ಯಾಯಾಮ ದೊರೆದು ದೇಹವು ಸುದೃಢಗೊಂಡು ಮನಸು ಹಾಗೂ ದೇಹದ ಸೌಂದರ್ಯ ವೃದ್ಧಿಸುತ್ತದೆ.

ವೆಬ್ದುನಿಯಾವನ್ನು ಓದಿ