ಚೈತ್ರ ಶುದ್ಧ ಪಾಡ್ಯಮಿಯ ಚಾಂದ್ರಮಾನ ಯುಗಾದಿ

'ಅಭಿಮನ್ಯು'
ಇಂದು ಭಾರತದೆಲ್ಲೆಡೆ ಬಹುತೇಕರಿಗೆ ಹೊಸ ವರುಷದ ಸಂಭ್ರಮ. ಹೊಸ ಯುಗದ ಆದಿ. ಅದುವೇ ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರದ ಯುಗಾದಿ. ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಇದನ್ನು ಯುಗಾದಿ ಅಥವಾ ಉಗಾದಿ ಅಂತ ಆಚರಿಸಿದರೆ, ಮಹಾರಾಷ್ಟ್ರದ ಮಂದಿ ಗುಡಿ ಪಡ್ವ ಅಂತಲೂ, ಸಿಂಧಿಗಳು ಚೇತಿ ಚಾಂದ್ ರೂಪದಲ್ಲೂ ಆಚರಿಸುತ್ತಾರೆ.

ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಚೈತ್ರ ಶುದ್ಧ ಪಾಡ್ಯಮಿ ದಿನ ಯುಗಾದಿ ಆಚರಿಸಲಾಗುತ್ತಿದ್ದು, ಇಂದು ಸರ್ವಧಾರಿ ಸಂವತ್ಸರಕ್ಕೆ ನಾಂದಿ ಹಾಡುವ ದಿನ. ತಿಥಿಯ ಆಧಾರದಲ್ಲಿ ಕೆಲವು ಕಡೆ ಏಪ್ರಿಲ್ 6ರಂದೂ, ಕೆಲವೆಡೆ ಏ.7ರಂದೂ ಯುಗಾದಿ ಆಚರಿಸಲಾಗುತ್ತಿದೆ. ಚಾಂದ್ರಮಾನ ಪಂಚಾಂಗ ಪ್ರಕಾರ, ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬುದು ನಂಬಿಕೆ.

ಶಾತವಾಹನ ದೊರೆ ಶಾಲಿವಾಹನ (ಗೌತಮಿಪುತ್ರ ಶತಕರ್ಣಿ ಎಂಬ ನಾಮಧೇಯವೂ ಇದೆ) ಪ್ರಾರಂಭಿಸಿದ ಶಾಲಿವಾಹನ ಶಕೆ ಆರಂಭವಾಗುವುದೂ ಇದೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್‌ನ ಕ್ರಿ.ಶ.78ಕ್ಕೆ ಸಮನಾದ ವರ್ಷದಿಂದ ಶಾಲಿವಾಹನ ಶಕೆ ಆರಂಭವಾಗುತ್ತದೆ. ಹೀಗಾಗಿ ಕ್ರಿ.ಶ.2008ನೇ ಇಸವಿಯು ಶಾಲಿವಾಹನ ಶಕೆಯ ಪ್ರಕಾರ 1930ನೇ ವರ್ಷ. ಶಾಲಿವಾಹನನು ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಆರಂಭಿಸಿದನೆಂದೂ ಇತಿಹಾಸ ಹೇಳುತ್ತದೆ.

ಇದೇ ದಿನ ಶ್ರೀರಾಮಚಂದ್ರನು ಲಂಕಾಧಿಪತಿ ರಾವಣನನ್ನು ಜಯಿಸಿ ಮರಳಿ ಅಯೋಧ್ಯಾ ಸಿಂಹಾಸನವೇರಿದ ಎಂದೂ ಉಲ್ಲೇಖವಿದೆ. ಅಂತೆಯೇ ವಿಷ್ಣುವು ಭೂದೇವಿಯ ರಕ್ಷಣೆಗೆ ಮತ್ಸ್ಯಾವತಾರ ತಳೆದ ದಿನವಿದು ಎಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಅಭ್ಯಂಜನ ಸ್ನಾನ ಮಾಡಿ, ದೇವರನ್ನು ಅರ್ಚಿಸಿ, ಹೊಸ ಬಟ್ಟೆ ಧರಿಸಿ, ಯುಗಾದಿ ದಿನದ ವಿಶೇಷ ಖಾದ್ಯಗಳನ್ನು ತಿನ್ನುವುದು ಹೆಚ್ಚಾಗಿ ಎಲ್ಲೆಡೆ ಕಂಡುಬರುವ ಆಚರಣೆ. ಬೇವಿನ ಎಲೆ-ಹೂಗಳ ಕಹಿ, ಬೆಲ್ಲದ ಸಿಹಿ, ಮಾವಿನ ಕಾಯಿ ಕಟು ರುಚಿ, ಹುಣಸೆಹಣ್ಣಿನ ರಸದ ಹುಳಿ, ಕಾಳುಮೆಣಸಿನ ಖಾರ- ಈ ಷಡ್ರಸಯುಕ್ತವಾದ ಯುಗಾದಿ ಪಚ್ಚಡಿ ತೆಲುಗಿನಲ್ಲಿ ಪ್ರಖ್ಯಾತವಾಗಿದ್ದರೆ, ಕನ್ನಡದಲ್ಲಿ ಬೇವು-ಬೆಲ್ಲಗಳು ಜೀವನದ ಸಿಹಿ-ಕಹಿಗಳ ಪ್ರತೀಕ.

ಇದರೊಂದಿಗೆ ಪಂಚಾಂಗಶ್ರವಣಕ್ಕೆ ಅದರದ್ದೇ ಆದ ಮಹತ್ವವಿದೆ. ಹೊಸ ವರ್ಷದ ಫಲಾಫಲಗಳು ಯಾವ ರೀತಿ ಇರುತ್ತವೆ ಎಂಬುದು ಈ ಪಂಚಾಂಗಶ್ರವಣದಿಂದ ತಿಳಿದುಬರುತ್ತದೆ. ಮನೆ ಹಿರಿಯರು ಎಲ್ಲರಿಗೂ ಕೇಳಿಸುವಂತೆ ಹೊಸ ಸಂವತ್ಸರದ ಫಲಾಫಲಗಳನ್ನು ಓದಿ ಹೇಳುವುದು ರೂಢಿ.

ಯುಗಾದಿ ಸಾಹಿತ್ಯೋತ್ಸವಗಳು, ಯುಗಾದಿ ಚರ್ಚೆಗಳು, ಟಿವಿ ಕಾರ್ಯಕ್ರಮಗಳು, ಸಂಗೀತ, ಭರತನಾಟ್ಯ- ಇವುಗಳೊಂದಿಗೆ ಯುಗಾದಿಯ ಸಂಭ್ರಮಕ್ಕೆ ಮತ್ತಷ್ಟು ಕಳೆ ಇರುತ್ತದೆ.

ಇದು ವಸಂತ ನವರಾತ್ರಿಯ ಆರಂಭದ ದಿನವೂ ಆಗಿದ್ದು, 9 ದಿನಗಳ ಬಳಿಕ ಚೈತ್ರ ಶುದ್ಧ ನವಮಿಯಂದು ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಸೌರಮಾನ ಕ್ಯಾಲೆಂಡರ್ ಪ್ರಕಾರ ಯುಗಾದಿ ಅಂದರೆ ಹೊಸ ವರ್ಷ ಬರುವುದು ಒಂದು ವಾರದ ಬಳಿಕ. ಈ ಬಾರಿ ಅದರ ಆಚರಣೆ ಏ.13ರಂದು. ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದವರಿಗೆ ಇದು ಹೊಸ ವರ್ಷದ ಸಂಭ್ರಮವಾಗಿದೆ. ಕಳೆದ ವರ್ಷದವರೆಗೂ ತಮಿಳುನಾಡಿನಲ್ಲಿಯೂ ಇದೇ ತಮಿಳು ಹೊಸ ವರ್ಷವಾಗಿತ್ತು. ಆದರೆ, ಅದು ಈ ಬಾರಿಯಿಂದ ಮಕರ ಸಂಕ್ರಮಣದ ದಿನವಾದ ಜನವರಿ 14ಕ್ಕೆ ಬದಲಾಯಿಸಲಾಗಿದೆ.

ವೆಬ್ದುನಿಯಾವನ್ನು ಓದಿ