ಇದು ಪ್ರಸವೋದ್ಯಮ: ಮಗು ಹೆರಲು ಭಾರತಕ್ಕೆ ಔಟ್‌ಸೋರ್ಸಿಂಗ್!

PTI
ಭಾರತದಂತಹಾ ರಾಷ್ಟ್ರಗಳಿಂದ ಬಾಡಿಗೆ ತಾಯಂದಿರನ್ನು ಗೊತ್ತುಪಡಿಸುವ ಸಿರಿವಂತ ರಾಷ್ಟ್ರಗಳ ಹೊಸ 'ಹೊರಗುತ್ತಿಗೆ' ಪದ್ಧತಿಯು ಇತ್ತೀಚೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌‍ನಲ್ಲಿ ನಡೆದ ಸಮಾವೇಶವೊಂದರಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಂತಾನಹೀನ ದಂಪತಿಗಳು ಬಾಡಿಗೆ ತಾಯಂದಿರ ಮೂಲವನ್ನಾಗಿ ಅಮೆರಿಕವನ್ನೂ ಮೀರಿಸಿ, ಭಾರತವನ್ನೇ ಆಯ್ದುಕೊಳ್ಳುತ್ತಿದ್ದಾರೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞೆ, ಸಹಾಯಕ ಪ್ರೊಫೆಸರ್ ಕ್ಯಾಥರೀನ್ ವಾಲ್ಡಬಿ ಹೇಳಿದ್ದಾರೆ.

ಹೆಚ್ಚಿನ ಸ್ಥಳಗಳಲ್ಲಿ ಸಂತಾನೋತ್ಪತ್ತಿ ಎಂಬುದು ಮಹಿಳೆಯರಿಗೊಂದು ಉದ್ಯೋಗವೇ ಆಗಿಬಿಟ್ಟಿದೆ ಎಂದು ಕ್ಯಾಥರೀನ್‌ರನ್ನು ಉಲ್ಲೇಖಿಸಿ ಎಬಿಸಿ ಆನ್‌ಲೈನ್ ವರದಿ ಮಾಡಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಗ್ರಿಫಿತ್ ವಿಶ್ವವಿದ್ಯಾಲಯ ಆಯೋಜಿಸಿದ್ದ ಏಷ್ಯಾ-ಪೆಸಿಫಿಕ್ ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜಿಕ ಜಾಲ ಸಮಾವೇಶದಲ್ಲಿ ಕ್ಯಾಥರೀನ್ ಅವರು ಪ್ರಧಾನ ಭಾಷಣಕಾರರಾಗಿದ್ದರು.

ಸಂತಾನಹೀನ ದಂಪತಿಗಳು ಭಾರತಕ್ಕೆ ಹೋಗಿ ಐವಿಎಫ್ (In vitro fertilisation - ಅಂತರ್‌ಗರ್ಭಾಶಯ ಫಲವತ್ತತೆ) ಮಾಡಿಸಿ, ಅದನ್ನು ಆ ಬಳಿಕ ಭಾರತೀಯ ಮಹಿಳೆಯ (ಬಾಡಿಗೆ ತಾಯಿ)ಯ ಗರ್ಭದೊಳಗಿರಿಸಲಾಗುತ್ತದೆ. ಕೈತುಂಬಾ ಹಣ ಬರುವುದರಿಂದ ಆಕೆ, ಬಾಡಿಗೆ ಗರ್ಭಿಣಿಯಂತೆ ಕಾರ್ಯ ನಿರ್ವಹಿಸುತ್ತಾಳೆ. ಭಾರತ ಸರಕಾರವು ಕೂಡ ಈ 'ಫಲವತ್ತತೆ ಔಟ್‌ಸೋರ್ಸಿಂಗ್' ಅನ್ನು ಇತರ ಕಾಲ್‌ಸೆಂಟರ್‌ಗಳಷ್ಟೇ ಆಸ್ಥೆಯಿಂದ ಪ್ರೋತ್ಸಾಹಿಸುತ್ತಿದೆ ಎಂದು ಕ್ಯಾಥರೀನ್ ಹೇಳಿದ್ದಾರೆ.

ಅಮೆರಿಕಕ್ಕೆ ಹೋಲಿಸಿದರೆ, ಬಾಡಿಗೆ ತಾಯಂದಿರು, ವೈದ್ಯಕೀಯ ತಜ್ಞರು ಮತ್ತು ಹೆರಿಗೆ ಕ್ಲಿನಿಕ್ ವ್ಯವಸ್ಥೆಗಳು ಭಾರತದಲ್ಲಿ ತೀರಾ ಕೈಗೆಟಕುವ ದರದಲ್ಲಿ ಲಭ್ಯವಿದೆ. ಭಾರತೀಯ ಬಾಡಿಗೆ ತಾಯಂದಿರು ಮಗುವೊಂದನ್ನು ಹೆತ್ತುಕೊಟ್ಟರೆ ತಲಾ 5000 ದಿಂದ 6000 ಡಾಲರ್ (ಅಂದಾಜು ಎರಡೂವರೆಯಿಂದ ಮೂರು ಲಕ್ಷ ರೂ.ವರೆಗೆ) ಹಣ ಸಂಪಾದಿಸುತ್ತಾರೆ. ಇದು ಅವರ ವಾರ್ಷಿಕ ಆದಾಯಕ್ಕಿಂತಲೂ ಆರರಿಂದ ಹತ್ತು ಪಟ್ಟುಗಳಷ್ಟು ಹೆಚ್ಚಿರುತ್ತದೆ.

ಒಟ್ಟಾರೆಯಾಗಿ ಭಾರತಕ್ಕೆ ಹೋಗಿ ಬಂದು ಮಗುವನ್ನು ಹೆರಿಸಿಕೊಂಡು ಬರುವುದಕ್ಕೆ ಪಾಶ್ಚಾತ್ಯ ದಂಪತಿಗಳಿಗೆ 15ರಿಂದ 20 ಸಾವಿರ ಡಾಲರ್ ವೆಚ್ಚವಾಗುತ್ತದೆ. ಆದರೆ ಅಮೆರಿಕಕ್ಕೆ ಹೋದರೆ ಇದು ಒಂದು ಲಕ್ಷ ಡಾಲರ್‌ವರೆಗೆ ತಲುಪುತ್ತದೆ ಎಂದಿರುವ ಕ್ಯಾಥರೀನ್, ಈ ದರದಲ್ಲಿ ಭಾರತವು ಅಮೆರಿಕಕ್ಕೆ ಸವಾಲೊಡ್ಡುತ್ತಿದೆ ಎಂದಿದ್ದಾರೆ.

ಹೆಚ್ಚಿನ ರಾಷ್ಟ್ರಗಳಲ್ಲಿ ಈ ರೀತಿಯ ಪ್ರಕ್ರಿಯೆಗೆ ಅವಕಾಶಗಳಿಲ್ಲ. ಮತ್ತು ಭಾರತ ಸರಕಾರವು ವೈದ್ಯಕೀಯ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ವೀಸಾ ಕೊಡುಗೆಗಳನ್ನೂ ನೀಡುತ್ತಿದೆ. ಹೀಗಾಗಿ ಗರ್ಭಾಂಕುರ 'ಉದ್ಯಮ'ವು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಗಳಿವೆ ಎಂದೂ ಆಕೆ ಹೇಳಿದ್ದಾರೆ.

ಈ ವಿಧಾನದಲ್ಲಿ, ತನ್ನದೇ ಅಂಡಾಣು ಬಳಸಿ ಬಾಡಿಗೆ ತಾಯಿ ಆಗುವ ಪ್ರಕ್ರಿಯೆಗಿಂತ ಈ ಪ್ರಕ್ರಿಯೆಯಲ್ಲಿ ಮಗುವಿಗೆ ತಾಯಿಯ ಯಾವುದೇ ವಂಶವಾಹಿ (ಜೆನೆಟಿಕ್) ಅಂಶಗಳು ದೊರೆಯುವುದಿಲ್ಲ. ಅಂದರೆ, ಮಗುವು ಬಾಡಿಗೆ ತಾಯಿಯನ್ನು ಹೋಲುವ ರೂಪ ಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ಮೂಲಕ ಬಿಳಿಯರು-ಕರಿಯರು ಎಂಬ ಭೇದಭಾವವೂ ಹೊಸ ಮಗುವಿನಲ್ಲಿ ಕಾಣಲು ಸಾಧ್ಯವಿಲ್ಲ. ಅದು ಪಾಶ್ಚಾತ್ಯರಂತೆಯೇ ಇರುತ್ತದೆ.

ಇದು ಭಾರತದಲ್ಲಿ ಪರ್ಯಾಯ ಜೀವನೋಪಾಯವಾಗಿ ಬೆಳೆಯುತ್ತಿದೆ. ಒಂಬತ್ತು ತಿಂಗಳು ಹೊತ್ತು ಹೆತ್ತರೆ ಒಂದು ಮನೆ ತೆಗೆದುಕೊಳ್ಳುವಷ್ಟು ಹಣ ಮಾಡಿಕೊಳ್ಳುವ ಅವಕಾಶ ಇರುವುದರಿಂದ ಭಾರತೀಯ ಮಹಿಳೆಯರು ಅತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತದೆ ದೆಹಲಿ ಮೂಲದ ಮಹಿಳಾ ಆರೋಗ್ಯ ಸಲಹಾ ಸಂಸ್ಥೆ ಶಮಾ.

ಗರ್ಭದೊಳಗೆ ಭ್ರೂಣ ಸೇರಿಸಿದಾಗ ವೈದ್ಯಕೀಯ ರಿಸ್ಕ್‌ಗಳೂ ಜೊತೆಗಿರುತ್ತವೆ. ಇಂಥ ಸಂದರ್ಭದಲ್ಲಿ ಹಣಕ್ಕಾಗಿ ಮನೆಯವರು ಮಹಿಳೆಯ ಮೇಲೆ ಒತ್ತಡ ಹೇರುವ ಸಾಧ್ಯತೆಗಳೂ ಇಲ್ಲದಿಲ್ಲ.

ವೆಬ್ದುನಿಯಾವನ್ನು ಓದಿ