ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು

ಕನ್ನಡ ಬ್ಲಾಗಿಗರತ್ತ ಒಮ್ಮೆ ಕಣ್ಣು ಹಾಯಿಸಿದರೆ ತತ್‌ಕ್ಷಣ ಗಮನ ಸೆಳೆಯುವ ಹೆಸರು ಯು.ಆರ್.ಅನಂತಮೂರ್ತಿ. ಜ್ಞಾನಪೀಠ ಪ್ರಶಸ್ತಿ ಪಡೆದ ಒಬ್ಬ ಗಣ್ಯರು ಬ್ಲಾಗ್ ಬರೆಯುತ್ತಿರುವುದು ಇತರ ಬ್ಲಾಗಿಗರಿಗೆ ದೊಡ್ಡ ಸ್ಫೂರ್ತಿ. ಹೆಸರಾಂತ ಬರಹಗಾರರು, ಉದಯೋನ್ಮುಖ ಬರಹಗಾರರು, ಪ್ರವೃತ್ತಿ ಬರಹಗಾರರು ಮತ್ತಿತರರು ಬ್ಲಾಗುಗಳನ್ನು ಆರಂಭಿಸಿ ಪರ್ಯಾಯ ಸಾಹಿತ್ಯ ಲೋಕ ಸೃಷ್ಟಿಸಬೇಕಿದ್ದರೆ ಅನಂತಮೂರ್ತಿಯಂತಹವರ ಉಪಸ್ಥಿತಿ ಬಹುಮುಖ್ಯ. "ಋಜುವಾತು" (rujuvathu.sampada.net) ಎಂಬ ಹೆಸರಿನ ಬ್ಲಾಗನ್ನು ನಡೆಸುತ್ತಿರುವ ಅವರು ಇದರಲ್ಲಿ ಗಂಭೀರ ಮತ್ತು ಚಿಂತನಶೀಲ ಬರಹಗಳನ್ನು ಪ್ರಕಟಿಸುತ್ತಾರೆ.

ಅವರು ಇತ್ತೀಚೆಗೆ ಬರೆದ "ಭಾರತದ ಏಕತೆಯಲ್ಲಿ ಪುರಾಣ ಮತ್ತು ಇತಿಹಾಸ" ಎಂಬ ಲೇಖನವು ಓದುಗರನ್ನು ಚಿಂತನೆಗೀಡು ಮಾಡುತ್ತದೆ. ಅವರ ವಿಚಾರವನ್ನು ಒಪ್ಪದವರೂ ಕೂಡ ಒಮ್ಮೆ ಅವರ ವಿಚಾರಧಾರೆಯತ್ತ ಧಾವಿಸಿಬರುವಂತೆ ಮಾಡುತ್ತದೆ. ಭಾರತೀಯರಲ್ಲಿ ಹಾಸುಹೊಕ್ಕಾಗಿರುವ ಪೌರಾಣಿಕ ಭಾವನೆಯ ನೆಲೆಗಟ್ಟನ್ನು ಆಧುನಿಕತೆ ಮತ್ತು ಮೂಲಭೂತವಾದಗಳು ಹೇಗೆ ಹದಗೆಡಿಸುತ್ತವೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಅನಂತಮೂರ್ತಿಯವರು ಬರೆಯುತ್ತಾರೆ.

"....ಕೋಮುವಾದಿ ಭಾರತ ಏನಿದ್ದರೂ ನಮ್ಮ ಧರ್ಮಗಳಲ್ಲಿರುವ ಹೊಸತನದ ಚೈತನ್ಯವನ್ನು ಕೊಂದುಹಾಕುತ್ತದೆ ಅಷ್ಟೆ. ಬೇರುಗಳಿಲ್ಲದ ಆಧುನಿಕತೆ ಮತ್ತು ಅತ್ಯಂತ ಉಗ್ರವಾದ ಮೂಲಭೂತವಾದಿ ಕೋಮುವಾದಗಳೆರಡೂ ಭಾರತದ ಜನರಲ್ಲಿರುವ ಸೃಜನಶೀಲವಾದ ಪುರಾಣ ಪ್ರಜ್ಞೆಯನ್ನು ದುರ್ಬಲಗೊಳಿಸಿ, ಇತಿಹಾಸವನ್ನೂ ರಾಜಕಾರಣಕ್ಕಾಗಿ ತಿರುಚಲು ತೊಡಗುತ್ತದೆ."

ಈ ಲೇಖನದಲ್ಲಿ ಅನಂತಮೂರ್ತಿ ಒಂದು ವಿಷಯ ಪ್ರಸ್ತಾಪಿಸುತ್ತಾರೆ. ಅದು ಬಹಳ ಮಾರ್ಮಿಕವಾಗಿದೆ. "...ಒಂದು ಪ್ರಬಲವಾದ ರಾಷ್ಟ್ರವೆಂದರೆ ಒಂದೇಒಂದು ಭಾಷೆ, ಒಂದೇಒಂದು ಧರ್ಮ ಮತ್ತು ಒಂದೇಒಂದು ಜನಾಂಗ ಇರಬೇಕೆಂಬ ಐರೋಪ್ಯ ಮಾದರಿಯ ರಾಷ್ಟ್ರದ ಕಲ್ಪನೆಯ ಬೆನ್ನು ಹತ್ತಿಹೋದರೆ, ಅದು ಭಾರತವನ್ನು ಚೂರುಚೂರು ಮಾಡಿಹಾಕುತ್ತದೆ ಅಷ್ಟೆ. ಐರೋಪ್ಯ ಮಾದರಿಯ ಇಂಥ ರಾಷ್ಟ್ರವನ್ನೇ ಹಿಂದೆ ವೀರ್ ಸಾವರ್ಕರ್ ಬಯಸಿದ್ದು. ಈಗ ಪರಮಾಣು ರಾಷ್ಟ್ರವಾಗಿರುವ ಭಾರತ ಕೂಡ ಇದನ್ನೇ ಬಯಸುತ್ತಿದೆ. ಆದರೆ ಭಾರತದ ಐಕ್ಯತೆಯ ಹೆಸರಿನಲ್ಲಿ ನಾವು ಅತಿಯಾದ ಕೇಂದ್ರೀಕರಣಕ್ಕೆ ಜೋತುಬಿದ್ದರೆ ಅದರಿಂದ ನಾವು ದ್ವೀಪಗಳಾಗುತ್ತೇವೆ ಅಷ್ಟೆ ಎಂಬುದನ್ನು ನಮ್ಮ ಸಮಕಾಲೀನ ರಾಜಕೀಯ ಅನುಭವವೇ ನಮಗೆ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದೆ....".

ವೈವಿಧ್ಯತೆಯು ಭಾರತೀಯತೆಯ ಜೀವಾಳ. ಒಂದು ಭಾಷೆಯನ್ನು ಇಡೀ ಭಾರತೀಯರ ಮೇಲೆ ಹೇರಿ ಏಕರೂಪತೆ ಸಾಧಿಸುವ ಪ್ರಯತ್ನವಾಗುತ್ತಿದೆ ಎಂದು ಪ್ರತಿಭಟಿಸುವ ಅನಂತಮೂರ್ತಿಯವರು ಹಿಂದಿ ಭಾಷೆಯ ಹೇರಿಕೆಯ ಬಗ್ಗೆ ಪ್ರಸ್ತಾಪಿಸದೆಯೇ ಅದನ್ನು ಪರೋಕ್ಷವಾಗಿ ಟೀಕಿಸುತ್ತಾರೆ.

ಈ ಲೇಖನಕ್ಕೂ ಮುನ್ನ ಅವರು ಬ್ಲಾಗಿನಲ್ಲಿ ಬರೆದ "2067ರಲ್ಲಿ ಭಾರತ" ಎಂಬ ಇನ್ನೊಂದು ಲೇಖನ ವಿನೂತನವಾಗಿದೆ. ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಹಿಂದೂಸ್ತಾನ ಟೈಮ್ಸ್ ಪತ್ರಿಕೆಗೆ ಅವರೇ ಬರೆದ ಆಂಗ್ಲ ಲೇಖನದ ಕನ್ನಡಾನುವಾದವಿದು. 2067 ನೇ ಇಸವಿಯಲ್ಲಿ ನಿಂತು ಪೂರ್ವಾವಲೋಕನ ಮಾಡುವ ಅವರು ಪ್ರಸಕ್ತ ನಮ್ಮ ಭವಿಷ್ಯದ ಅಪಾಯಗಳನ್ನು ಮತ್ತು ಅವಕ್ಕೆ ಪರಿಹಾರ ಮಾರ್ಗಗಳನ್ನು ಸೂಚ್ಯವಾಗಿ ಚಿತ್ರಿಸುತ್ತಾರೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಒಬ್ಬ ಬರಹಗಾರರಿಂದ ಇಂಥ ಪ್ರಬುದ್ಧ ಲೇಖನಗಳಲ್ಲದೇ ಮತ್ತೇನನ್ನು ನಿರೀಕ್ಷಿಸಲಾದೀತು. ಅನಂತಮೂರ್ತಿಯವರು ತಾವು ಪ್ರಸಕ್ತ ಬರೆಯುವ ಪ್ರತಿಯೊಂದು ಲೇಖನಗಳನ್ನು ಈ ಬ್ಲಾಗಿಗೂ ಉಣಬಡಿಸಿದರೆ ಬೇರೆ ಯುವ ಬ್ಲಾಗ್ ಪ್ರತಿಭೆಗಳಿಗೆ ಸ್ಫೂರ್ತಿ ದೊರೆತೀತು.

ವೆಬ್ದುನಿಯಾವನ್ನು ಓದಿ