ವೆಬ್‌ದುನಿಯಾ ವಾರದ ಬ್ಲಾಗ್: ನೆನಪು ನೇವರಿಕೆ

ಬ್ಲಾಗ್ ಅವಕಾಶಗಳ ಫಲವಾಗಿ ಕುಡಿಯೊಡೆದ ಪ್ರತಿಭೆಗಳಲ್ಲಿ ಸಿಂಧು ಕೂಡ ಒಬ್ಬರು. ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ ಎಂದು ತಲೆಬರಹ ಹಾಕಿಕೊಂಡು ನೆನಪು ನೇವರಿಕೆ (nenapu-nevarike.blogspot.com) ನಡೆಸುತ್ತಿರುವ ಸಿಂಧು ಅವರು ಯುವ ಬ್ಲಾಗಿಗರಿಗೆ ಆದರ್ಶಪ್ರಾಯ.

ಈಗಿನ ಅನೇಕ ಯುವ ಬರಹಗಾರರು ತಮ್ಮ ಲೇಖನಗಳಲ್ಲಿ ರವಿ ಬೆಳಗೆರೆಯವರ ಬರಹಶೈಲಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ರವಿ ಬೆಳಗೆರೆಯಂತೆ ಸಾಮಾನ್ಯ ಇಂಗ್ಲೀಷ್ ಪದಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಬೀಗುತ್ತಾರೆ. ಆದರೆ ಬೆಳಗೆರೆ ಲೇಖನಗಳಲ್ಲಿರುವ ವಾಕ್ಯಗಳ ಸರಳತೆ ಮತ್ತು ತೀಕ್ಷ್ಣತೆ, ಅವರ ನಿರೂಪಣಾ ಶೈಲಿ, ಅವರು ಮನಸ್ಸಿಗೆ ನಾಟುವ ಕ್ಷಣಗಳಿಗೆ ಹೆಚ್ಚು ಒತ್ತು ನೀಡಿ ಬರೆಯುವ ಪರಿ ನಿಜಕ್ಕೂ ಅನುಕರಣೀಯ. ದುರದೃಷ್ಟವಶಾತ್, ಯುವಬರಹಗಾರರಲ್ಲಿ ಇಂಗ್ಲೀಷ್ ಪದ ಬಳಕೆ ಮಾತ್ರವೇ ಅನುಕರಣೀಯವಾಗಿಬಿಟ್ಟಿರುತ್ತದೆ.

ಸಿಂಧು ಅವರ ನೆನಪು ನೇವರಿಕೆ ಓದುವಾಗ ರವಿ ಬೆಳಗೆರೆ ನೆನಪಿಗೆ ಬಂದುಹೋಗುತ್ತಾರೆ. ಈ ಬ್ಲಾಗಿನ ಬರಹಗಳಲ್ಲಿ ರವಿಯವರ ಶೈಲಿಯ ಛಾಪು ಇದೆ ಎಂದಲ್ಲ, ಆದರೆ ಅಂತಹ ಶೈಲಿಗೆ ಮಾರುಹೋದ ಯುವಕರಿಗೆ ಸಿಂಧು ಅವರು ಬೇರೊಂದು ದಾರಿ ತೋರಿಸಿಕೊಡುತ್ತಾರೆ. ಅವರ ಬರಹಗಳಲ್ಲಿ ರವಿ ಬೆಳಗೆರೆಯ ಛಾಪು ಇಲ್ಲವೆಂದಲ್ಲ, ಆದರೆ ಎಲ್ಲಿಯೋ ಒಂದು ಕಡೆ ಅವರು ತಮ್ಮ ಸ್ವಂತಿಕೆಯನ್ನು ಹಿಡಿದಿಡುತ್ತಾರೆ. ಸಿಂಧು ಅವರು ಪದಗಳೊಂದಿಗೆ ಆಟವಾಡುವ ಪರಿ ನೋಡಿದರೆ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಉತ್ತಮ ಕೊಡುಗೆಯಾಗಿ ಬೆಳೆಯಬಹುದು ಎಂದೆನಿಸುತ್ತದೆ.

ತಮ್ಮ ಜೀವನದಲ್ಲಿ ಘಟಿಸುವ ವಿಷಯಗಳನ್ನೇ ಹಿಡಿದುಕೊಂಡು ನಿರೂಪಣೆ ಮಾಡುವ ಸಿಂಧು ಅವರು ನೆನಪು ನೇವರಿಕೆಯಲ್ಲಿ ಅದ್ಭುತ ನೈಜ ಕಥಾನಕಗಳನ್ನು ಸೃಷ್ಟಿಸುತ್ತಾರೆ. ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ ಎಂಬುದನ್ನು ಅವರು ನಿರೂಪಿಸುತ್ತಾರೆ. ಪ್ರತಿಯೊಂದು ಘಟನೆಯ ಹಿಂದೆ ಮನತಟ್ಟುವ ಕತೆಗಳಿರುತ್ತವೆಂಬುದನ್ನು ಅರಿಯಲು ನೀವು ನೆನಪು ನೇವರಿಕೆಯಲ್ಲಿರುವ 'ಗಡೀಪಾರು ಗವಾಕ್ಷಿ' ಎಂಬ ಕಥಾಲೇಖನವನ್ನು ಓದಬೇಕಾಗುತ್ತದೆ. ಶವಾಗಾರದ ವಾಹನ ಚಾಲಿಸುವ ಅಜ್ಜನೋರ್ವ ಹೇಳುವ ಮಾತುಗಳು ಈ ಕೆಳಗೆ ಇದೆ. ಒಮ್ಮೆ ಕಣ್ಣಾಯಿಸಿ...

"ಅದೂ ನೀವು ಎಳೇಜನ ಯಾನ್ ಯಾನೋ ಕನ್ಸು ಕಾಣ್ತೀರಲ್ರವ್ವಾ ಹಿಂತಾದ್ನೇ ಓದಬೇಕು, ಹಿಂತಲ್ಲೆ ಓದ್ ಬೇಕು, ಹಿಂತಾ ಕ್ಯಲ್ಸನೇ ಇಡೀಬೇಕು, ಸಂಬಳ ಇಂಗಿಂಗೇ ಇರ್ಬೇಕು, ಗೆಣೆಕಾರನೋ ಗೆಣೆಕಾತಿನೋ ಇರಬ್ಯಾಕು, ಇಂಗಿಂಗೇ ಇರಬ್ಯಾಕು... ಅಂತ ಕನ್ಸು ಕಾಣೋವ್ರೆಲ್ಲ ಒಂದ್ಕಡೆ ಇರ್ತಾರಂತೆ. ನಿಮ್ಗೆಲ್ಲ ನಂಬ್ರು ಹಾಕೋ ಮ್ಯಾಷ್ಟ್ರು ಅವತ್ತು ತಲಕ್ಯಟ್ಟು ನಂಬ್ರು ಸರೀಗೆ ಒಗೀಲಿಲ್ಲಾಂದ್ರೆ, ಅಪ್ಲಿಕೇಸನ್ನು ಕೊಟ್ಗಂಡು ನಿಂತ್ರೆ ನಿಂತಾವ ಫೀಸ್ ಕೊಡಾಕಾಗಾಕಿಲ್ಲ ಹೋಗಯ್ಯೋ ಅಂತ ಸೀಟ್ ಕೊಡ್ದೆ ಕಳ್ಸಿದಾಂದ್ರೆ, ಅಗ್ಲೂ ರಾತ್ರೆ ಕೂತ್ಕಂಡ್ ಓದಿ, ನಂಬ್ರಾನೂ ತ್ಯಗ್ದು, ಹಿಂಟ್ರೂನಾಗೆಲ್ಲ ಚಲೋ ಮಾಡಿದ್ರೂ ಜಾತಿನೋ, ಸಿಫಾರ್ಸೋ ಯಾವ್ದೋ ಸರೀಗಾಗ್ಲಿಲ್ಲ ಅಂತ ಕ್ಯಲ್ಸ್ ತ್ಯಪ್ಪೋದ್ರೆ.. ಸಿಕ್ಕಿದ್ ಕೆಲ್ಸದಾಗೂ ತಿಂಗಳ್ ನಡ್ಸೋದೇ ಕಷ್ಟ ಆಗೋದ್ರೆ, ಎಲ್ಲಾ ನೀನೇ ಅಂತ ಕಣ್ಣಾಗ್ ಕಣ್ಣಿಟ್ಟು ನೋಡುದ್ ಗೆಣೆಕಾರ ಯೋನೋ ಕಾರ್‍ಣಾನೇ ಕೊಡ್ದೆ ಉಲ್ಟಾ ಒಡುದ್ರೆ.. ಹಿಂಗೇ.. ಕಂಡಿದ್ ಕನುಸೆಲ್ಲ ನೋಡ್ತಾ ನೋಡ್ತಾ ನೀರ್ ಗುಳ್ಳೆ ತರಾ ಒಡುದ್ ಹೋಗುತ್ತಲ್ಲವ್ವಾ ಆವಾಗ, ಅಲ್ಲಿ ಕನಸಿನ ರಾಜ್ಯದಾಗೆ ಇರಾಕಾಗಾಕಿಲ್ಲ. ಯಾಕ್ ಯೋಳಿ.. ಅಲ್ಲಿರೋರೆಲ್ಲಾ ಕನಸು ಕಾಣ್ತಿರ್ತಾರೆ ಅದನ್ನ ಸುಳ್ಳು ಅಂತ ಯೋಳೋಕ್ಕಾಗಲ್ಲ, ನಮ್ಮ ಕನಸು ಮುರುದ್ ಬಿದ್ದಿದ್ದನ್ನ ತಡ್ಕೊಳಾಕ್ಕಾಗಲ್ಲ.. ಸೂಕ್ಷ್ಮಸ್ತರು ಅಂಗೇ ಬದುಕೋ ದಾರಿ ಬರ್ ಬಾದಾಗೋಗಿ, ಯಂಗ್ ಬಂತೋ ಅಂಗೆ ಜೀವ ತೇಯ್ತಾರೆ.. ಕೊನೆಗೊಂದಿನ ನನ್ ಗಾಡೀ ತಾವ... ಸ್ವಲ್ಪ ಮಂಡಬುದ್ದಿಯೋರು.. ಅಲ್ ಕಂಡ್ತಲಾ ನಿಮ್ಗೆ ಗವಾಕ್ಷಿ ಅದ್ರಾಗೆ ತೂರ್ಕೊಂಡ್ ಬಂದು ಈ ಕಡೆ ಯಾವಾರದ್ ಪ್ರಪಂಚದಾಗೆ ಬೀಳ್ತಾರೆ. ಅಷ್ಟ್ ದಿನ ಅನುಭೋವ್ಸಿದ್ದ ಕನಸು ಅವ್ರಿಗೆ ಏನೋ ಮಾಡ್ಬೇಕು ಅನ್ನೋ ಹಪಾಹಪಿ ತುಂಬಿರುತ್ತೆ. ಮುರುದ್ ಬಿದ್ದು ಮಣ್ ಪಾಲಾದ ಕನ್ಸು ಯಾವಾರ ಕಲ್ಸಿರುತ್ತೆ. ಎಂಗೋ ಹಣೇ ಬರಾ ಬದಲಾಯಿಸ್ ಕ್ಯಂಡು ತಮಗೇ ಬೇಕಾದಂಗೆ ಬದುಕಾದ್ ಕಲ್ತ್ ಬುಡ್ತಾರೆ..."

ನಮ್ಮ ಜೀವನದಲ್ಲಿ ನಮಗೇ ತಿಳಿಯದೇ ಕೆಲವು ಮೌಢ್ಯ ನಂಬಿಕೆಗಳನ್ನು ಇರಿಸಿಕೊಳ್ಳುತ್ತವೆ. ಅವು ಕ್ಷಣಿಕ ಭ್ರಮೆ ಎಂದು ಅರಿವಾಗುವಷ್ಟರಲ್ಲಿ ಕಾಲ ಸಾಕಷ್ಟು ವ್ಯಯವಾಗಿರುತ್ತದೆ. ಇಂತಹ ಬಹುಮುಖ್ಯವಾದ ಮತ್ತು ಸಂಕೀರ್ಣ ವಿಷಯವನ್ನು ಮನೋಜ್ಞವಾಗಿ ನಿರೂಪಿಸುವ ಸಿಂಧು ಅವರು ನಮಗೆ ನೋಟಗಳಾಚೆಗಿನ ಚಿತ್ರಣಗಳನ್ನು ಒದಗಿಸುತ್ತಾರೆ. "ಹಿಡಿದಿಡಲಾಗದ ಚಿತ್ರಗಳು" ಎಂಬ ಕವಿತೆಯಲ್ಲಿ ಬರುವ ಈ ಕೆಳಗಿನ ಸಾಲುಗಳನ್ನು ಅನುಭವಿಸಿ ನೋಡಿ...

...ಬಿಡಿಸಲಾಗದ ಚಿತ್ರಗಳನ್ನು
ತುಂಬಲಾಗದ ಬಣ್ಣಗಳನ್ನು
ಊಹಿಸುತ್ತ ಮುದಗೊಂದು,
ಎಚ್ಚರದಿ ಖಿನ್ನವಾಗಿ
ಕೈಚಲ್ಲಿ ಕೂತು ದಿಟ್ಟಿಸುವುದಷ್ಟೆ ಉಳಿದದ್ದು
ಮಾತು ದೂರ,
ಮೌನ ಭಾರ...

ನಮ್ಮ ನಮ್ಮೊಳಗಿರುವ ಹತಾಶತೆಯು ಈ ಸಾಲುಗಳಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ. ಅವರ ಕವಿತೆಗಳಲ್ಲಿ ನೈಜತೆಯ ಸೆಳತವಿದೆ. ಕತೆಯಿರಲಿ, ಕವಿತೆಯಿರಲಿ ಉತ್ತಮ ನಿರೂಪಣೆಯ ಅಡಿಪಾಯ ಹೊಂದಿರುವ ಸಿಂಧು ಅವರು ಪರಿಪೂರ್ಣ ಸಾಹಿತಿಯಾಗುವತ್ತ ಸಾಗಿದ್ದಾರೆ ಎಂಬುದು ನಿಸ್ಸಂಶಯ.

ವೆಬ್ದುನಿಯಾವನ್ನು ಓದಿ