ತಂಗಿ

PTI
ಆಗ ತಾನೆ ಶಿಕ್ಷಣ ಪದವಿ ಮುಗಿಸಿದ ನಾನು ಕೆಲಸಕ್ಕಾಗಿ ನಾಲ್ಕೈದು ಕಡೆ ಕಾಲೆಳೆದು ಬೇಸರಗೊಂಡಿದ್ದೆ. ಹಾಗಾಗಿ ಕೆಲ ದಿನಗಳವರೆಗೆ ಎತ್ತಲೂ ಹೋಗದೆ ಮನೆಯಲ್ಲೇ ಉಳಿದಾಗ, ಉಮ್ಮ ದುಃಖದಿಂದ ಅದೇನೋ ಹೇಳತೊಡಗಿದರು.

'ಈ ಊರಲ್ಲಿ ಯಾರೂ ಕಲಿಯದಷ್ಟು ನೀ ಕಲಿತೆ. ಆದರೆ ಏನನ್ನು ಸಾಧಿಸಿದೆ? ದಿನಕ್ಕೆರಡು ಪುಸ್ತಕವನ್ನಿಡಿದು ನಡೆದಾಡಿದಾಗ ನಾನೆಷ್ಟು ಕುಶಿಗೊಂಡಿದ್ದೆ ಗೊತ್ತಾ? ಅದೆಷ್ಟು ಕನಸು ಕಂಡಿದ್ದೆ. ಆದರೆ ಈಗ ....ಹ್ಞೂಂ, ಅದಿರಲಿ ನಿನ್ನ ಜತೆ ಹರಕು ಮುರುಕು ಚಡ್ಡಿ ತೊಟ್ಟು ಆಡುವಾಡುತ್ತಿದ್ದ ಆ ಮಜೀದ್, ಅಶ್ರಫ್ ಈಗ ದಿನಕ್ಕೆ ನೂರಿನ್ನೂರು ರೂಪಾಯಿ ಸಂಪಾದಿಸುವುದಿಲ್ಲವಾ? ಆದರೆ ನೀನು!!!?' ಎಂದೆಲ್ಲಾ ಕೊರೆಯತೊಡಗಿದ್ದರಿಂದ ನಾನೂ ಕೂಡ ಬೇಸರಗೊಂಡಿದ್ದೆ. ಹಾಗೇ ಹತ್ತಿರದ ಗೋಳಿ ಮರದಡಿಯಲ್ಲಿ ಕೂತು ಚಿಂತಿಸಿತೊಡಗಿದಾಗಲೆಲ್ಲಾ ಉಮ್ಮಳ ಮಾತು ಸರಿ ಎನಿಸತೊಡಗಿತು. ಆದರೆ ನನ್ನ ಗೌರವ-ಪ್ರತಿಷ್ಠೆಗೆ ತಕ್ಕಂತೆ ಕೆಲಸ ಸಿಗದಿದ್ದರೆ ನಾನೇನು ಮಾಡಲಿ?

ಮುಂದಿನ ಕೆಲವೇ ದಿನಗಳ ನಡುವೆ ತೀವ್ರ ಪ್ರಯತ್ನದ ಸಲುವಾಗಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿತು. ಹಲವು ತಿಂಗಳು ಗರಿಗೆದರಿ ಹಾರಿಹೋದವು. ಈಗ ಮನೆಯ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿತು.

ಇವೆಲ್ಲದರ ಮಧ್ಯೆ ಸುಮಾರು ಎರಡು ಕಿ.ಮೀ.ದೂರದ ಹರೇಕಳ ಎಂಬಲ್ಲಿಗೆ ಹೋಗಿ ಹೈಸ್ಕೂಲು ವ್ಯಾಸಂಗ ಮಾಡುತ್ತಿದ್ದ ನನ್ನ ತಂಗಿ ಆಮಿನ ಊರವರಿಗೊಂದು ಒಗಟಾಗಿ ಕಂಡಳು.

ಏನು ಇವನೇ......ನೀನು ಕಲಿತೆ ಅಂತ ನಿನ್ನ ತಂಗಿಯನ್ನೂ ದೂರದ ಹೈಸ್ಕೂಲಿಗೆ ಕಳುಹಿಸಿಕೊಡುವುದಾ? ಎಷ್ಟಾದರೂ ಅವಳು ಬೆಳೆಯುವ ಹೆಣ್ಣಲ್ಲವಾ? ನಾಳೆ ಮದುವೆ, ಗಂಡ, ಅದಿರಲಿ ಮೊನ್ನೆ ಅವಳು ಅದೇನೋ ಸ್ಮರಣ ಸಂಚಿಕೆಯಲ್ಲಿ ಕಥೆ ಅಂತ ಕಥೆ, ಬರೆದಿದ್ದಾಳಂತೆ.....ಹೌದಾ?ಹೀಗಾದರೆ ಹೇಗೆ?" ಎಂದು ನೆರೆಯ ಉಮರಾಕ ಪ್ರಶ್ನಿಸಿದಾಗ ನನಗೆ ಕೋಪ ಉಕ್ಕೇರಿತು. ಅವರು ಮತ್ತೆ ಮಾತು ಉದುರಿಸಿದಾಗ ನಾನು ಖಾರವಾಗಿ ಅವರ ಬಾಯಿ ಮುಚ್ಚಿಸಿದ್ದೆ. ಮತ್ತೆ ಮೂರು ತಿಂಗಳು ಉರುಳಿತು.ಅದೊಂದು ದಿನ ಓಡೋಡಿ ಬಂದು ಸಿಹಿತಿಂಡಿ ನನ್ನ ಕೈಗಿಡುತ್ತಾ ಕಾಕಾ...ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಫಸ್ಟ್ ಕ್ಲಾಸ್ ಪಾಸ್ ಆಗಿರುವೆ. ...ಮತ್ತೆ, ನನ್ನನ್ನು ಕಾಲೇಜಿಗೆ ಸೇರಿಸುವೆಯಾ?' ಎಂದು ಯಾಚಿಸಿದಳು.

- ಹಂಝ ಮಲಾರ್

ವೆಬ್ದುನಿಯಾವನ್ನು ಓದಿ