ಟಿಕೆಟ್.. ಟಿಕೆಟ್: ಬೆಂಗಳೂರು ಹೋಟೆಲ್‌ಗಳಿಗೆ ಸುಗ್ಗಿ

ಮಂಗಳವಾರ, 8 ಏಪ್ರಿಲ್ 2008 (12:37 IST)
ಚುನಾವಣಾ ದಿನಾಂಕ ಪ್ರಕಟವಾಗಿರುವಂತೆಯೇ ಟಿಕೆಟ್ ಆಕಾಂಕ್ಷಿಗಳು ಟಿಕೆಟಿಗಾಗಿ ಇನ್ನಿಲ್ಲದ ಲಾಬಿ ಆರಂಭಿಸಿದ್ದಾರೆ. ಇದರಿಂದಾಗಿಯೇ ರಾಜಧಾನಿಯಲ್ಲಿರುವ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿನ ವಾತಾವರಣ ಕಾವೇರತೊಡಗಿದ್ದು, ಮುಖಂಡರಿಂದ, ಕಾರ್ಯಕರ್ತರಿಂದ ಕಚೇರಿ ಗಿಜಿಗುಡುತ್ತಿದೆ.

ಮೊದಲ ಹಂತದ 89 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಇದರ ಪರಿಣಾಮ ನಗರದ ಫೈವ್ ಸ್ಟಾರ್ ಹೊಟೇಲ್‌ಗಳು ಕೂಡಾ ಪಕ್ಷದ ಮುಖಂಡರಿಂದ, ಕಾರ್ಯಕರ್ತರಿಂದ ತುಂಬಿ ತುಳುಕುತ್ತಿವೆ. ತಮ್ಮ ಕ್ಷೇತ್ರಗಳಿಂದ ಬಂದು ಟಿಕೆಟ್‌ಗಾಗಿ ಪ್ರಯತ್ನಿಸುವ ಮಂದಿ ನಗರದ ಹೊಟೇಲ್‌ಗಳನ್ನು ಆಶ್ರಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್‌ಗಳ ಬೇಡಿಕೆ ಹೆಚ್ಚಿದ್ದರಿಂದ ಸಹಜವಾಗಿಯೇ ಇವು ತಮ್ಮ ಬಾಡಿಗೆಯನ್ನು ಕೂಡಾ ಏರಿಸಿವೆ.

ಟಿಕೆಟ್ ಗಿಟ್ಟಿಸಬೇಕೆಂದು ಪಣ ತೊಟ್ಟಿರುವ ಹಲವು ಆಕಾಂಕ್ಷಿಗಳು ಜನಬಲ, ಧನಬಲ ಪ್ರದರ್ಶನ ನಡೆಸತೊಡಗಿದ್ದಾರೆ. ಪ್ರಭಾವಿ ರಾಜಕಾರಣಿಗಳಿಂದ ಒತ್ತಡ ಕೂಡಾ ಬರುತ್ತಿದೆ. ಜನಬಲದ ಮೂಲಕ ಟಿಕೆಟ್ ವಂಚಿತರಾದರೆ ಬಂಡಾಯದ ಬಾವುಟ ಹಾರಿಸುವ ಪರೋಕ್ಷ ಎಚ್ಚರಿಕೆ ನೀಡತೊಡಗಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಈ ಪ್ರವೃತ್ತಿಯಿಂದ ನಗರದ ಹೊಟೇಲ್‌ಗಳು ಭರ್ತಿಯಾಗಿವೆ.

ಬಿಜೆಪಿ, ಕಾಂಗ್ರೆಸ್, ಹಾಗೂ ಜೆಡಿಎಸ್ ಪಕ್ಷಗಳ ಕಚೇರಿಗಳಿಗೆ ಹಾಗೂ ತಮ್ಮ ಪಕ್ಷದ ಮುಖಂಡರ ಮನೆಗಳಿಗೆ ಹತ್ತಿರವಾಗಿರುವ ಹೊಟೇಲ್‌ಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಇದರೊಂದಿಗೆ ಟಿಕೆಟ್ ಗಿಟ್ಟಿಸುವ ಪರೋಕ್ಷ ಪ್ರಯತ್ನ ಕೂಡಾ ಆ ಹೊಟೇಲ್‌ಗಳಲ್ಲೇ ನಡೆಯುತ್ತಿದೆ. ರಾಜಧಾನಿಯ ಚಾಲುಕ್ಯ, ಜನಾರ್ದನ, ಮಯೂರ, ರಾಮಕೃಷ್ಣ ಸೇರಿದಂತೆ ಇತರ ಹೊಟೇಲ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಟಿಕೆಟ್ ಖಾತ್ರಿಯಾಗಿರುವ ಅಭ್ಯರ್ಥಿಗಳು ಈಗಾಗಲೇ ಪ್ರಚಾರಕಾರ್ಯ ಆರಂಭಿಸಿದರೆ, ಸಂದೇಹವಿರುವ ಅಭ್ಯರ್ಥಿಗಳು ಮುಖಂಡರಿಗೆ ಎಡತಾಕುತ್ತಿದ್ದಾರೆ. ಒಟ್ಟಾರೆ ಇದು ರಾಜಧಾನಿಯ ಹೊಟೇಲ್‌ಗಳಿಗೆ ಸುಗ್ಗಿಯ ಕಾಲ.

ವೆಬ್ದುನಿಯಾವನ್ನು ಓದಿ