ಯುವರಾಜ್‌ಗೆ ನಾಯಕತ್ವ ದೊರೆಯದ ಕೊರಗು: ತಂದೆ ಶಂಕೆ

ಶನಿವಾರ, 22 ಸೆಪ್ಟಂಬರ್ 2007 (10:54 IST)
ಡರ್ಬನ್‌ನಲ್ಲಿ ಮೈದಾನದಲ್ಲಿ ರನ್ನುಗಳ ಸುರಿಮಳೆ ಸುರಿಸಿ ಹೀರೋ ಪಟ್ಟ ಅಲಂಕರಿಸತೊಡಗಿರುವ ಯುವರಾಜ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ದೊರೆತಿಲ್ಲ ಎಂಬ ಕೊರಗು ಕಾಡುತ್ತಿದೆಯೇ?

ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಪ್ರಕಾರ, ಹೌದು. ಈ ವಿಷಯದಲ್ಲಿ ಮಗ ತಮ್ಮ ಬಳಿ ಒಮ್ಮೆಯೂ ವಿಷಯವೆತ್ತಿಲ್ಲ, ಆದರೆ ನಾಯಕತ್ವ ವಿಷಯದಲ್ಲಿ ತಮ್ಮ ಮಗನನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ ಅವರು.

ಆದರೂ ನಾಯಕತ್ವವೇ ಪ್ರಧಾನ ಅಲ್ಲ, ದೇಶದ ತಂಡಕ್ಕಾಗಿ ಆಟದ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯ ಎಂದೂ ಮಾಜಿ ಕ್ರಿಕೆಟಿಗರಾದ ಯೋಗರಾಜ್ ಸೇರಿಸುತ್ತಾರೆ. ಯುವರಾಜ್ ಹಿರಿಯ ಆಟಗಾರರಲ್ಲೊಬ್ಬರಾಗಿದ್ದರೂ ಅವರನ್ನು ಕಡೆಗಣಿಸಲಾಗಿದೆ ಎಂಬುದು ಅವರ ಕೊರಗು.

ಒಂದಲ್ಲ ಒಂದು ದಿನ ಅವರು ಭಾರತ ತಂಡವನ್ನು ಮುನ್ನಡೆಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಇಂಥ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಷಯ ಎಂದು ಹೇಳಿದರು.

ತಮ್ಮ ಮಗನನ್ನು ನಾಯಕನನ್ನಾಗಿ ಮಾಡಿಲ್ಲ ಎಂಬುದು ತಮಗೆ "ಬೇಸರ" ತರಿಸಿದೆ ಎಂದು ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಯೋಗರಾಜ್ ಹೇಳಿದ್ದರು.

ಬಹುಶಃ ಮಗನಿಗೂ ಇದೇ ವಿಷಯ ಕಾಡುತ್ತಿರಬಹುದು. ಎಲ್ಲವನ್ನೂ ಅವನು ನನ್ನಲ್ಲಿ ಹೇಳುತ್ತಾನೆ. ಆದರೆ ಈ ವಿಷಯದ ಬಗ್ಗೆ ಏನೂ ಹೇಳಿಲ್ಲ. ಯಾವುದೋ ಸಮಸ್ಯೆಯೊಂದು ಅವನನ್ನು ಬಾಧಿಸುತ್ತಿರಬಹುದು. ಅದು ನಾಯಕತ್ವದ ವಿಷಯವೇ ಎಂಬುದು ನನಗೆ ಗೊತ್ತಿಲ್ಲ ಎಂದು ಯೋಗರಾಜ್ ನುಡಿದರು.

ವೆಬ್ದುನಿಯಾವನ್ನು ಓದಿ