ಸೈಮಂಡ್ಸ್ ಇಲ್ಲದೆ ಕೆಟ್ಟೆವು: ಪಾಂಟಿಂಗ್ ಅಳಲು

ಮಂಗಳವಾರ, 9 ಜೂನ್ 2009 (15:06 IST)
ಟ್ವೆಂಟಿ-20 ವಿಶ್ವಕಪ್‌ನಿಂದ ಆರಂಭದಲ್ಲೇ ಹೊರಬಿದ್ದ ಬಳಿಕ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್, ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರಿಲ್ಲದೆ ಇದ್ದದ್ದು ತಮ್ಮ ತಂಡದ ಮೇಲೆ ಗಂಭೀರವಾಗ ಪರಿಣಾಮ ಬೀರಿತು ಎಂಬ ಕಾರಣ ನೀಡಿದ್ದಾರೆ.

ಮೊದಲು ವೆಸ್ಟ್ ಇಂಡೀಸ್ ವಿರುದ್ಧ, ಬಳಿಕ ಶ್ರೀಲಂಕಾ ವಿರುದ್ಧ ಎರಡೂ ಲೀಗ್ ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯಾ, ಟಿ-20 ವಿಶ್ವಕಪ್- 2ನೇ ಆವೃತ್ತಿಯಿಂದ ಸೋಮವಾರ ಹೊರಬಿದ್ದಿತ್ತು.

ಸೈಮಂಡ್ಸ್ ಅವರು ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅವರನ್ನು ವಾಪಸ್ ಕಳುಹಿಸಿತ್ತು. 'ಇದು ತಂಡದಲ್ಲಿ ನಮ್ಮ ವ್ಯವಸ್ಥೆಯ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಕ್ರಿಕೆಟಿನ ಈ ಮಾದರಿಯಲ್ಲಿ ಅವರೊಬ್ಬ ವಿಶ್ವದಲ್ಲೇ ಅತ್ಯುತ್ತಮ ಆಟಗಾರ. ಅಂಥವರನ್ನು ತಂಡದಿಂದ ನೀವು ಕಳೆದುಕೊಂಡಾಗ, ಅದು ಖಂಡಿತವಾಗಿಯೂ ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ' ಎಂದು ಪಾಂಟಿಂಗ್ ಹೇಳಿದರು.

ಆದರೆ ಇದನ್ನೇ ಸೋಲಿಗೆ ನೆಪವಾಗಿ ಹೇಳಲು ನಮಗೆ ಇಚ್ಛೆಯಿಲ್ಲ. ಅವರ ಗೈರುಹಾಜರಿಯಲ್ಲಿ ತಂಡದ ಉಳಿದ 14 ಮಂದಿ ಪ್ರಯತ್ನ ಹೆಚ್ಚಿಸಬೇಕಿತ್ತು. ನಮಗೆ ಆ ಸಾಮರ್ಥ್ಯ ಇದೆ, ಹಿಂದೆಯೂ ಅದನ್ನು ತೋರ್ಪಡಿಸಿದ್ದೇವೆ ಎಂದೂ ಅವರು, ತಂಡದ ಸಾಮುದಾಯಿಕ ಹೊಣೆಯ ಬಗೆಗೂ ಚುಚ್ಚಿದರು.

ವೆಬ್ದುನಿಯಾವನ್ನು ಓದಿ