ವಡೋದರದಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಆರಂಭಿಕ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಗಾಯಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ತಯಾರಿಯಲ್ಲಿರುವ ಟೀಮ್ ಇಂಡಿಯಾಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
ವರದಿಗಳ ಪ್ರಕಾರ ಇಂದು ಅಭ್ಯಾಸ ನಡೆಸುತ್ತಿರುವ ವೇಳೆ ಗಂಭೀರ್ ತಲೆಗೆ ಗಾಯವಾಗಿದ್ದು, ತಕ್ಷಣವೇ ಅವರು ಅಭ್ಯಾಸ ಸ್ಥಳದಿಂದ ನಿರ್ಗಮಿಸಿದರು.
ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಏಳು ಏಕದಿನ ಪಂದ್ಯಗಳ ಸರಣಿಗಾಗಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶುಕ್ರವಾರ ಗಾಯಗೊಂಡಿದ್ದರು. ವೇಗಿ ಮುನಾಫ್ ಪಟೇಲ್ ಬೌಲಿಂಗ್‌ಗೆ ಬ್ಯಾಟಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಚೆಂಡು ಅವರ ಮೊಣಕಾಲಿನ ಹಿಂಬದಿಗೆ ಬಡಿದಿತ್ತು.
ನಿನ್ನೆ ಅಭ್ಯಾಸದಿಂದ ಅವರು ನಿವೃತ್ತಿ ಪಡೆದಿದ್ದರಾದರೂ ಇಂದು ಮರಳಿದ್ದಾರೆ. ಆ ಮೂಲಕ ಧೋನಿ ಗಾಯ ಗಂಭೀರವಾಗಿಲ್ಲ ಎಂದು ತಿಳಿದು ಬಂದಿದೆ.
ಸೆಹ್ವಾಗ್‌ಗೂ ಗಾಯ.. ಈ ನಡುವೆ ಮತ್ತೊಬ್ಬ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಶುಕ್ರವಾರ ಅಭ್ಯಾಸ ನಡೆಸುತ್ತಿರುವ ವೇಳೆ ಅವರ ಎದೆಗೆ ಚೆಂಡು ಬಡಿದಿದ್ದು, ಶನಿವಾರ ಅವರು ಅಭ್ಯಾಸಕ್ಕೆ ಹಾಜರಾಗಿಲ್ಲ.
ಗಾಯಾಳುವಾಗಿದ್ದ ಕಾರಣ ಕಳೆದ ಹಲವಾರು ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದ ಸೆಹ್ವಾಗ್ ಆಸೀಸ್ ಸರಣಿಗೆ ಆಯ್ಕೆಯಾಗಿದ್ದರು. ಇದೀಗ ಮತ್ತೆ ಗಾಯಾಳುವಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಪ್ರಕಾರ ಈ ಮೂವರ ಗಾಯಗಳೂ ಗಂಭೀರವಲ್ಲ. ಹಾಗಾಗಿ ಭಾನುವಾರ ಆಸೀಸ್ ವಿರುದ್ಧ ನಡೆಯಲಿರುವ ವಡೋದರದ ಮೊದಲ ಏಕದಿನ ಪಂದ್ಯದಲ್ಲಿ ಮೂವರು ಪ್ರಮುಖ ಆಟಗಾರರೂ ಪಾಲ್ಗೊಳ್ಳಲಿದ್ದಾರೆ ಎಂದಿದೆ.
ಈ ಪಟ್ಟಿಯಲ್ಲಿ ಯುವಿಗೂ ಸ್ಥಾನ.. ಆಲ್-ರೌಂಡರ್ ಯುವರಾಜ್ ಸಿಂಗ್ ಗಾಯಾಳುವಾಗಿದ್ದು, ಇದು ಕೂಡ ತಂಡಕ್ಕೆ ಮಹತ್ವದ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಯುವರಾಜ್ ಭಾನುವಾರದ ಪಂದ್ಯದಲ್ಲಿ ಆಡುವ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಅವರು ಎರಡನೇ ಪಂದ್ಯದಲ್ಲಿ ಆಡುವುದು ಖಚಿತ ಎಂದು ನಾಯಕ ಧೋನಿ ಹೇಳಿಕೆ ನೀಡಿದ್ದಾರೆ.
ಧೋನಿ ಸ್ಪಷ್ಟನೆ... ಟೀಮ್ ಇಂಡಿಯಾದ ಹಲವು ಆಟಗಾರರು ದೈಹಿಕ ಕ್ಷಮತೆಯಿಂದ ಬಳಲುತ್ತಿರುವ ಹೊರತಾಗಿಯೂ ಸಂಪೂರ್ಣ ತಂಡವು ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲಿದೆ ಎಂದು ನಾಯಕ ಧೋನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಂಡದ ಹಲವರು ಗಾಯಾಳುಗಳಾಗಿದ್ದೇವೆ. ಆದರೆ ಹೆಚ್ಚಿನ ಆಟಗಾರರು ನಾಳೆಯ ಪಂದ್ಯದಲ್ಲಿ ಆಡಲಿದ್ದಾರೆ ಎಂದರು.