ಕಸಬ್, ಅಫ್ಜಲ್‌ಗ್ಯಾಕೆ ಟಿಕೆಟ್ ನೀಡಿಲ್ಲ: ಠಾಕ್ರೆ ವ್ಯಂಗ್ಯ

ಸೋಮವಾರ, 28 ಮಾರ್ಚ್ 2011 (14:49 IST)
PTI
ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕಾಗಿ ವೇದಿಕೆ ಸಿದ್ಧಗೊಂಡಿದೆ. ಅತ್ತ ಇದನ್ನೇ ಸದವಕಾಶವಾಗಿ ಪರಿಗಣಿಸಿರುವ ಭಾರತೀಯ ಸರಕಾರವು ಶಾಂತಿ ಮರು ಸ್ಥಾಪಿಸುವ ನಿಟ್ಟಿನಲ್ಲಿ ಪಂದ್ಯ ವೀಕ್ಷಿಸಲು ಪಾಕಿಸ್ತಾನ ಅಧ್ಯಕ್ಷ ಮತ್ತು ಪ್ರಧಾನಿಗೆ ಆಹ್ವಾನ ನೀಡಿದೆ.

ಆದರೆ ಪ್ರಧಾನಿ ಮನಮೋಹನ್ ಸಿಂಗ್ ರಾಜಕೀಯ ನಿಲುವನ್ನು ತೀವ್ರ ಟೀಕೆಗೆ ಗುರಿಯಾಗಿಸಿರುವ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ, 26/11 ದಾಳಿ ರೂವಾರಿ ಉಗ್ರ ಕಸಬ್ ಮತ್ತು ಸಂಸತ್ ದಾಳಿಕೋರ ಅಫ್ಜಲ್ ಗುರು ಅವರಿಗ್ಯಾಕೆ ಟಿಕೆಟ್ ನೀಡಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಮುಂಬೈ ದಾಳಿಯ ನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಪಂದ್ಯವೊಂದು ಆಡುತ್ತಿದೆ. ಇದೀಗಲೇ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ವೀಕ್ಷಣೆಗಾಗಿ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರಿಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಆಹ್ವಾನ ನೀಡಿದ್ದಾರೆ.

ಇದೀಗ ತಮ್ಮ ಮುಖ ಪತ್ರಿಕೆ ಸಾಮ್ನಾದಲ್ಲಿ ಪ್ರಧಾನಿ ನಿಲುವನ್ನು ಖಂಡಿಸಿರುವ ಠಾಕ್ರೆ, ಯೂಸುಫ್, ಗಿಲಾನಿಗೆ ಟಿಕೆಟ್ ನೀಡುವ ಮೂಲಕ ಅಫ್ಜಲ್ ಮತ್ತು ಕಸಬ್‌ ಮೇಲೆ ಅನ್ಯಾಯ ಮಾಡಲಾಗಿದೆ ಎಂದು ಬರೆದಿದ್ದಾರೆ.

ಹಿಂದಿನಿಂದಲೂ ಶಾಂತಿಯ ಹೆಸರಲ್ಲಿ ಕ್ರಿಕೆಟ್ ಆಟ ನೋಡಲು ಪಾಕ್ ನಾಯಕರನ್ನು ಬರಮಾಡಿಕೊಳ್ಳಲಾಗುತ್ತಿದೆ. ಆದರೆ ಸಮಸ್ಯೆಗಳನು ಇಲ್ಲಿಗೆ ಇತ್ಯರ್ಥ್ಯವಾಗುವುದಿಲ್ಲ. ಭಾರತದ ಮೇಲೆ ಭಯೋತ್ಪಾದಕರ ದಾಳಿ ಮುಂದುವರಿಯುತ್ತಲೇ ಇವೆ ಎಂದು ಠಾಕ್ರೆ ಹೇಳಿದರು.

ಶತ್ರು ರಾಷ್ಟ್ರಗಳ ವಿರುದ್ಧ ಕಠಿಣ ನಿಲುವು ತೋರುವ ಬದಲು ಪ್ರಧಾನಿ ಮನಮೋಹನ್ ಸಿಂಗ್ ಖುದ್ದಾಗಿ, ಭಯೋತ್ಪಾದಕರಿಂದ ಉಂಟಾಗಿರುವ ಗಾಯಕ್ಕೆ ಉಪ್ಪು ಎರಚುತ್ತಿದ್ದಾರೆ ಎಂದು ಠಾಕ್ರೆ ಆಪಾದಿಸಿದರು.

ವೆಬ್ದುನಿಯಾವನ್ನು ಓದಿ