ಪೀಟರ್ಸನ್ ಮೇಲೆ ಪ್ರಭಾವ ಬೀರಿದ ಯುವರಾಜ್

ಶುಕ್ರವಾರ, 5 ಜೂನ್ 2009 (12:47 IST)
ಯುವರಾಜ್ ಸಿಂಗ್ ಆಟದ ವೈಖರಿ ಬಗ್ಗೆ ತುಂಬು ಮನದ ಪ್ರಶಂಸೆ ವ್ಯಕ್ತಪಡಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ಯುವಿಯಂತಹ ಆಟಗಾರರು ಟ್ವೆಂಟಿ-20 ಕ್ರಿಕೆಟನ್ನು ಹೊಸ ಎತ್ತರಕ್ಕೆ ಏರಿಸಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ವೆಂಟಿ-20 ಕ್ರಿಕೆಟನ್ನು ಮುಂದಿನ ಹಂತಕ್ಕೆ ಒಯ್ಯಬಲ್ಲ ಸಾಕಷ್ಟು ಆಟಗಾರರಿದ್ದಾರೆ. ನನ್ನ ಪ್ರಕಾರ, ಈ ಕಿರು ರೂಪದ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳಿಗೇ ಹೆಚ್ಚು ಮಣೆ ಎಂದು ನೆದರ್ಲೆಂಡ್ ವಿರುದ್ಧ ಶನಿವಾರ ಇಂಗ್ಲೆಂಡ್ ತನ್ನ ವಿಶ್ವಕಪ್ ಅಭಿಯಾನ ಆರಂಭಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪೀಟರ್ಸನ್ ನುಡಿದರು.

ಭಾರತದ ಯುವರಾಜ್ ಸಿಂಗ್ ನನ್ನನ್ನು ಅತ್ಯಂತ ಆಕರ್ಷಿಸಿದವರು. ಅಂತೆಯೇ ಸಿಕ್ಸರ್ ಸಿಡಿಸುತ್ತಾ, ವಿಕೆಟ್‌ಗಳನ್ನು ಕೀಳುತ್ತಾ, ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ತೋರುವವರು ಕೂಡ ನನ್ನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸಂಜಾತ, ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲಿ ಆರಂಭದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಿದ್ದ ಕೆವಿನ್ ಹೇಳಿದರು.

ಅಂತೆಯೇ, ವೆಸ್ಟ್ಇಂಡೀಸಿನ ಕ್ರಿಸ್ ಗೇಯ್ಲ್ ಅವರು ಟ್ವೆಂಟಿ-20 ಕ್ರಿಕೆಟಿನ ಅತ್ಯಂತ 'ವಿನಾಶಕಾರಿ' ಬ್ಯಾಟ್ಸ್‌ಮನ್ ಎಂಬುದು ಅವರ ಅಭಿಪ್ರಾಯ. ಅವರ ಬ್ಯಾಟಿಂಗ್ ಯಾವುದೇ ಉತ್ತಮ ಬೌಲರ್‌ನ ಧೃತಿಗೆಡಿಸಬಲ್ಲುದು. ಅವರು ಕಣದಲ್ಲಿದ್ದರೆ, ತಡೆಯುವವರೇ ಇಲ್ಲ. ಅವರು ಫುಲ್ ಫಾರ್ಮ್‌ನಲ್ಲಿರುವುದನ್ನು ನೋಡುವುದೆಂದರೆ ಭಯ ಎನ್ನುತ್ತಾರೆ ಕೆವಿನ್.

ಬೌಲರುಗಳಲ್ಲಿ ಬ್ರೆಟ್ ಲೀ, ಡೇಲ್ ಸ್ಟೆಯ್ನ್ ಮತ್ತು ಫಿಡೆಲ್ ಎಡ್ವರ್ಡ್ಸ್ ತೀರಾ ಕ್ಷಮತೆಯುಳ್ಳವರು ಎಂದಿದ್ದಾರವರು.

ವೆಬ್ದುನಿಯಾವನ್ನು ಓದಿ