ವೇಟ್ ಲಿಫ್ಟರ್ ಮೋನಿಕಾ ದೇವಿ ಅವರು ಉದ್ದೀಪನಾ ಮದ್ದು ಸೇವನೆ ಆರೋಪದಿಂದ ದೋಷಮುಕ್ತಗೊಂಡಿದ್ದರೂ ಕೂಡ, ಭಾರತೀಯ ಒಲಿಂಪಿಕ್ ಅಸೋಸಿ ಯೇಶನ್ ಮೋನಿಕಾ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂದು ಹೇಳುವ ಮೂಲಕ ಅವರ ಆಸೆಗೆ ತಣ್ಣೀರೆರಚಿದೆ.
ಭಾರತದ ವೇಟ್ ಲಿಫ್ಟರ್ ಮೋನಿಕಾ ಅವರ ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆ ಇತ್ಯರ್ಥಗೊಂಡಿತ್ತು. ಅಲ್ಲದೇ ಮಣಿಪುರದ ಮುಖ್ಯಮಂತ್ರಿ ಕೂಡ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಶನಿವಾರ ತಡ ರಾತ್ರಿ ಮೋನಿಕಾ ಅವರು ಬೀಜಿಂಗ್‌ಗೆ ತೆರಳಲಿದ್ದಾರೆ ಎಂಬುದಾಗಿಯೇ ಭಾರತೀಯ ಒಲಿಂಪಿಕ್ ಸಮಿತಿ ಮೂಲಗಳು ತಿಳಿಸಿದ್ದವು.
ಆದರೆ ಇದೀಗ, ಮೋನಿಕಾ ಅವರು ಬೀಜಿಂಗ್‌ಗೆ ಪ್ರಯಾಣಿಸಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಬಾಗಿಲುಗಳು ಬಂದ್ ಆಗಿದೆ, ಯಾಕೆಂದರೆ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಅವರಿಗೆ ಯಾವುದೇ ಅವಕಾಶ ದೊರೆಯದು ಎಂದು ಐಓಎ ಕಾರ್ಯದರ್ಶಿ ರಣಧೀರ್ ಸಿಂಗ್ ತಿಳಿಸಿದ್ದಾರೆ.
ಮೋನಿಕಾ ಭಾಗವಹಿಸುವುದು ಸಾಧ್ಯವಿಲ್ಲ, ಸಂಘಟಕರು ಅವರ ಪ್ರವೇಶ ಪತ್ರವನ್ನು ಪಡೆದಿಲ್ಲ, ಹೀಗಾಗಿ ಅವರಿಲ್ಲಿಗೆ ಬಂದರೂ ಭಾಗವಹಿಸಲು ಆಗದು ಎಂದು ಭಾರತೀಯ ಒಲಿಂಪಿಕ್ ತಂಡದ ಮುಖ್ಯಸ್ಥ ಬಲ್ಜಿತ್ ಸಿಂಗ್ ಸೇಥಿ ಹೇಳಿದ್ದಾರೆ.