ಸಾನಿಯಾ ಎಂಟರ ಘಟ್ಟಕ್ಕೆ, ಪೇಸ್ ಸೆ.ಫೈನಲ್‌ಗೆ

ಮಂಗಳವಾರ, 4 ಸೆಪ್ಟಂಬರ್ 2007 (10:42 IST)
PTI
ಮಾಜಿ ಚಾಂಪಿಯನ್ನರಾದ ಲೀಸಾ ರೇಮಂಡ್ ಮತ್ತು ಸಮಂತಾ ಸ್ಟಾಸರ್ ಅವರಿಗೆ ಆಘಾತ ನೀಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಾಟೆಕ್ ಅವರು, ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲಿಗೆ ಏರಿದ್ದಾರೆ.

ಆದರೆ, ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು ಮಹೇಶ್ ಭೂಪತಿ ಜೋಡಿಯು ಬೆಲಾರುಸ್ ಜೋಡಿಯೆದುರು ಪರಾಭವ ಅನುಭವಿಸಿ ಕೂಟದಿಂದ ಹೊರಬಿದ್ದಿದೆ.

ಸೋಮವಾರದ ಪಂದ್ಯದಲ್ಲಿ ಸಾನಿಯಾ-ಮಾಟೆಕ್ ಜೋಡಿಯು ಎರಡನೇ ಶ್ರೇಯಾಂಕಿತ ಅಮೆರಿಕನ್-ಆಸ್ಟ್ರೇಲಿಯನ್ ಜೋಡಿ ವಿರುದ್ಧ 2-6, 7-5, 7-5 ಅಂತರದಿಂದ ಗೆದ್ದು ಮುಂದಿನ ಸುತ್ತಿಗೆ ನೆಗೆಯಿತು. ಶ್ರೇಯಾಂಕರಹಿತ ಭಾರತ-ಅಮೆರಿಕನ್ ಜೋಡಿ ಇದೀಗ ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಐದನೇ ಶ್ರೇಯಾಂಕಿತ ಜೋಡಿಯಾದ ಚೀನಾ ತೈಪೈಯ ಯುಂಗ್ ಜಾನ್ ಚಾನ್ ಮತ್ತು ಚಿಯಾ ಜಂಗ್ ಚುವಾಂಗ್‌ರನ್ನು ಎದುರಿಸಲಿದೆ.

ಮಿಕ್ಸೆಡ್ ಡಬಲ್ಸ್‌ನಲ್ಲಿ ಸಾನಿಯಾ ಅವರು ಭೂಪತಿ ಜತೆಗೂಡಿ ಬೆಲಾರುಸ್‌ನ ವಿಕ್ಟೋರಿಯಾ ಅಜರೆಂಕಾ-ಮ್ಯಾಕ್ಸ್ ಮಿರ್ನಿ ವಿರುದ್ಧ 4-6, 1-6 ಅಂತರದಿಂದ ನೇರ ಸೋಲನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ.

ಇನ್ನೊಂದೆಡೆ, ಲಿಯಾಂಡರ್ ಪೇಸ್ ಅವರು ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಸ್ಪರ್ಧೆಯನ್ನು ಜೀವಂತವಾಗಿರಿಸಿದರು. ಪೇಸ್ ಮತ್ತವರ ಅಮೆರಿಕನ್ ಜತೆ ಆಟಗಾರ್ತಿ ಮೇಘಾನ್ ಶಾಗ್ನೇಸಿ ಅವರು ಸ್ಥಳೀಯ ಫೇವರಿಟ್‌ಗಳಾದ ಆಶ್ಲೆ ಹರ್ಕಿರೋಡ್-ಜಸ್ಟಿನ್ ಗೈಮೆಲ್‌ಸ್ಟಾಬ್ ಅವರನ್ನು 6-3, 6-4 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.

ಪೇಸ್-ಶಾಗ್ನೇಸಿ ಜೋಡಿಯು ಸೆಮಿಫೈನಲಿನಲ್ಲಿ ಬ್ರಿಟಿಷ್-ಅಮೆರಿಕನ್ ಜೋಡಿ ಜೇಮಿ ಮುರೇ ಮತ್ತು ಲೈಜೆಲ್ ಹೂಬರ್‌ರನ್ನು ಎದುರಿಸಬೇಕಿದೆ.

ವೆಬ್ದುನಿಯಾವನ್ನು ಓದಿ