ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ
ಬುಧವಾರ, 24 ಜನವರಿ 2018 (06:50 IST)
ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ಗ್ರಹದೋಷ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಇತ್ತಿಚೆಗೆ ನವಗ್ರಹ ವನ, ದೇವವನಗಳ ಸಂಖ್ಯೆ ಹೆಚ್ಚುತ್ತಿದೆ. ಕಟ್ಟಡಗಳ ನಿರ್ಮಾಣಕ್ಕಾಗಿ ಈಗ ಮರಗಿಡಗಳನ್ನು ಕಡಿದುಹಾಕುತ್ತಿದ್ದಾರೆ.
ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರಕ್ಕನುಸಾರವಾಗಿ ಯಾವ ಗಿಡಗಳನ್ನು ನೆಟ್ಟರೆ ಉತ್ತಮವೆಂಬುದನ್ನು ತಿಳಿಸಿದ್ದಾರೆ. ಅಶ್ವಿನಿ, ಮಘ, ಮೂಲಾ ನಕ್ಷತ್ರಗಳಿಗೆ ಕೇತುಗ್ರಹ ಅಧಿಪತಿಯಾಗಿರುವುದರಿಂದ ದರ್ಬೆ ಹಾಗು ಜಾಜಿಗಿಡವನ್ನು ಮನೆಯಲ್ಲಿ ನೆಟ್ಟು ಬೆಳೆಸಿದರೆ ಕೇತು ದೋಷ ನಿವಾರಣೆಯಾಗುತ್ತದೆ. ಭರಣಿ, ಪುಬ್ಬ, ಪೂರ್ವಾಷಾಡ ನಕ್ಷತ್ರಗಳಿಗೆ ಶುಕ್ರಗ್ರಹ ಅಧಿಪತಿಯಾಗಿರುವುದರಿಂದ ಔದಂಬರ, ಕಮಲದ ಗಿಡಗಳನ್ನು ಬೆಳೆಸಿದರೆ ಶುಕ್ರಗ್ರಹದ ದೋಷ ನಿವಾರಣೆಯಾಗುತ್ತದೆ. ಕೃತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರಗಳಿಗೆ ಸೂರ್ಯ ಅಧಿಪತಿಯಾಗಿದ್ದು, ದೋಷ ನಿವಾರಣೆಗೆ ಬಿಳಿ ಎಕ್ಕೆಯ ಹಾಗು ಕನಕಾಂಬರ ಹೂವಿನ ಗಿಡಗಳನ್ನು ನೆಡಬೇಕು. ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳಿಗೆ ಚಂದ್ರಗ್ರಹ ಅಧಿಪತಿಯಾಗಿರುವುದರಿಂದ ಮತ್ತುಂಗ ಮರ ಹಾಗು ಬಿಳಿತಾವರೆ ಗಿಡಗಳನ್ನು ನೆಟ್ಟರೆ ಚಂದ್ರಗ್ರಹ ದೋಷ ಪರಿಹಾರವಾಗುತ್ತದೆ.
ಮೃಗಶಿರ, ಚಿತ್ತ, ಧನಿಷ್ಠ ನಕ್ಷತ್ರಗಳಿಗೆ ಅಧಿಪತಿ ಕುಜ ಗ್ರಹವಾಗಿರುವುದರಿಂದ ಅದರ ದೋಷ ನಿವಾರಣೆಗೆ ಕಗ್ಗಲಿ ಮರ ಹಾಗು ದತ್ತುರಿ ಹೂವಿನ ಗಿಡಗಳನ್ನು ನೆಡಬೇಕು. ಆರಿದ್ರಾ, ಸ್ವಾತಿ, ಶತಭಿಷ ನಕ್ಷತ್ರಗಳಿಗೆ ರಾಹುಗ್ರಹ ಅಧಿಪತಿಯಾಗಿರುವುದರಿಂದ ಗರಿಕೆಯನ್ನು ಹಾಗು ಬೆಟ್ಟದಾವರೆ ಹೂವಿನ ಗಿಡಗಳನ್ನು ನೆಟ್ಟರೆ ರಾಹುದೋಷ ನಿವಾರಣೆಯಾಗುತ್ತದೆ. ಪುನರ್ವಸು, ವಿಶಾಖ, ಪೂರ್ವಭಾದ್ರಪದ ನಕ್ಷತ್ರಗಳಿಗೆ ಗುರು ಗ್ರಹ ಅಧಿಪತಿಯಾಗಿರುವುದರಿಂದ ಅದರ ದೋಷ ನಿವಾರಣೆಗೆ ಅರಳಿ ಹಾಗು ಪಾರಿಜಾತ ಗಿಡಗಳನ್ನು ಬೆಳೆಸಬೇಕು. ಪುಷ್ಯ, ಅನುರಾಧ, ಉತ್ತರಭಾದ್ರಪದ ನಕ್ಷತ್ರಗಳಿಗೆ ಶನಿಗ್ರಹ ಅಧಿಪತಿಯಾಗಿರುವುದರಿಂದ ಶನಿವೃಕ್ಷ ಹಾಗು ತುಳಸಿ ಗಿಡವನ್ನು ನೆಟ್ಟರೆ ಶನಿದೋಷ ನಿವಾರಣೆಯಾಗುತ್ತದೆ. ಆಶ್ಲೇಷ, ಜ್ಯೇಷ್ಠ, ರೇವತಿ ನಕ್ಷತ್ರಗಳಿಗೆ ಬುಧಗ್ರಹ ಅಧಿಪತಿಯಾಗಿರುವುದರಿಂದ ಉತ್ತರೆಣಿ ಗಿಡಗಳನ್ನು ಹಾಗು ಮಲ್ಲಿಗೆ ಗಿಡಗಳನ್ನು ನೆಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ