ಹಿಂದೂ ಧರ್ಮಗಳ ಪವಿತ್ರ ಆಚರಣೆಗಳಲ್ಲಿ ಧನುರ್ಮಾಸ ಒಂದು. ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವಿಷ್ಣುವಿನ ಪೂಜೆ ಮಾಡುವುದು ಶ್ರೇಷ್ಠ ಎನ್ನುತ್ತಾರೆ.
ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ 30 ದಿನಗಳು. ಅಂದರೆ ಡಿಸೆಂಬರ್ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' ಎಂದು ಕರೆಯುತ್ತಾರೆ.
ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಸಮಯವಾಗಿರುತ್ತದೆ. ಈ ಸಂದರ್ಭದಲ್ಲಿ ಮಡಿಯಿಂದ ಪೂಜೆ, ಧ್ಯಾನ, ಉಪವಾಸ ಹಾಗೂ ದಾನದಂತಹ ಮಹಾನ್ ಕಾರ್ಯಗಳನ್ನು ಮಾಡುವುದರಿಂದ ಭಾರೀ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆಯಿದೆ.
ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಹೊಸ ಆರಂಭಗಳನ್ನು ಮಾಡಿದರೆ ಕೇಡಾಗುತ್ತದೆ ಎಂಬ ನಂಬಿಕೆಯಿದೆ.
ಈ ಮಾಸದಲ್ಲಿ ಮೈಕೊರೆಯುವ ಚಳಿಯಿರುತ್ತದೆ. ಆದರೂ ಭಕ್ತರೂ ಭಕ್ತಿಯಿಂದ ಪೂಜೆಯಲ್ಲಿ ದೇಶದಾದ್ಯಂತ ಪಾಲ್ಗೊಳ್ಳುತ್ತಾರೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಧನುರ್ಮಾಸವನ್ನು ವಿಶೇಷವಾಗಿ ಆಚರಿಸುತ್ತಾರೆ.