ತಲೆಗೂದಲ ಉದುರುವಿಕೆಯನ್ನು ತಡೆಯಲು ಕೆಲವು ನೈಸರ್ಗಿಕ ಔಷಧಗಳು..

ಸೋಮವಾರ, 20 ಆಗಸ್ಟ್ 2018 (18:36 IST)
ಕೂದಲ ಸೀಳು, ವಿಪರೀತ ಕೂದಲು ಉದುರುವಿಕೆಯು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚು ಆತಂಕವನ್ನು ಉಂಟುಮಾಡುತ್ತದೆ. ದಟ್ಟವಾದ, ಉದ್ದನೆಯ ಕೂದಲು ಮಹಿಳೆಯರಿಗೆ ಸೌಂದರ್ಯದ ಪ್ರತೀಕ ಎಂದೇ ಹೇಳುತ್ತಾರೆ.

ಆದರೆ ಅದಕ್ಕೇ ತೊಂದರೆಯುಂಟಾದಾಗ ಮಹಿಳೆಯರು ಚಿಂತೆಗೀಡಾಗುತ್ತಾರೆ. ನಿಮ್ಮ ಕೂದಲ ಉತ್ತಮ ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಉತ್ತಮವಾದ ಕೆಲವು ನೈಸರ್ಗಿಕ ಹಾಗೂ ಮನೆ ಮದ್ದುಗಳು ಇಲ್ಲಿವೆ.
 
1. ಮೊಟ್ಟೆಯ ಮಾಸ್ಕ್ - ಮೊಟ್ಟೆಗಳಲ್ಲಿ ಸಲ್ಫರ್, ಫಾಸ್ಫರಸ್, ಸೆಲೆನಿಯಮ್, ಅಯೋಡಿನ್, ಸತು ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇವುಗಳು ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
 
*ಒಂದು ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಮತ್ತು ಜೇನನ್ನು ಸೇರಿಸಿ.
*ಅದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಅದನ್ನು ಕೂದಲ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ.
*ಈ ಮಾಸ್ಕ್ ಅನ್ನು 20 ನಿಮಿಷಗಳವರೆಗೆ ಇಟ್ಟು ನಂತರ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.
 
2. ತೆಂಗಿನಕಾಯಿ ಹಾಲು - ತೆಂಗಿನ ಕಾಯಿಯಲ್ಲಿರುವ ಪ್ರೋಟೀನ್ ಮತ್ತು ಅಗತ್ಯವಾದ ಕೊಬ್ಬು ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲ ಉದುರುವಿಕೆಯನ್ನು ತಡೆಯುತ್ತದೆ.
 
*ಒಂದು ತೆಂಗಿನಕಾಯಿಯ ತುರಿಯನ್ನು ಐದು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಪ್ಯಾನ್ ನಲ್ಲಿ ಹುರಿಯಿರಿ.
*ಅದು ಆರಿ ತಣ್ಣಗಾದ ಮೇಲೆ ಅದನ್ನು ರುಬ್ಬಿ ರಸವನ್ನು ಬೇರ್ಪಡಿಸಿ.
*ಈ ಹಾಲಿಗೆ 1 ಚಮಚ ಮೆಣಸಿನ ಕಾಳಿನ ಪುಡಿ ಮತ್ತು 1 ಮೆಂತೆ ಕಾಳಿನ ಪುಡಿಯನ್ನು ಸೇರಿಸಿ.
*ಈ ಮಿಶ್ರಣವನ್ನು ತಲೆಗೆ ಮತ್ತು ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಶಾಂಪೂ ಬಳಸಿ ತಲೆ ಸ್ನಾನ ಮಾಡಿ.
 
3. ಗ್ರೀನ್ ಟಿ - ಗ್ರೀನ್ ಟಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದದ್ದು ಅದು ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಕೂದಲ ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
 
*2-3 ಟೀ ಬ್ಯಾಗ್‌ಗಳನ್ನು 1-2 ಕಪ್ ಬಿಸಿ ನೀರಿನಲ್ಲಿ ಅದ್ದಿಡಿ.
*ಅದು ತಣ್ಣಗಾದ ನಂತರ ಅದನ್ನು ನಿಮ್ಮ ತಲೆಗೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿ ಮತ್ತು ನಿಮ್ಮ ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
*ಸುಮಾರು ಒಂದು ಗಂಟೆಯ ನಂತರ ತಣ್ಣನೆಯ ನೀರಿನಿಂದ ತಲೆ ಸ್ನಾನ ಮಾಡಿ
 
4. ಬೀಟ್ರೂಟ್ ರಸ - ಇದು ವಿಟಮಿನ್ ಸಿ ಮತ್ತು ಬಿ6, ಫೊಲೇಟ್, ಮ್ಯಾಂಗನೀಸ್, ಬೀಟೈನ್‌ನ ಅಂಶವನ್ನು ಸಮೃದ್ಧವಾಗಿ ಹೊಂದಿದ್ದು ಇವೆಲ್ಲವೂ ಕೂದಲ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯವಾಗಿದೆ.
 
*8-10 ಬೀಟ್ರೂಟ್ ಎಲೆಗಳನ್ನು ಕುದಿಸಿ ಅದರೊಂದಿಗೆ ಒಂದು ಹಿಡಿ ಗೋರಂಟಿ ಎಲೆಯನ್ನು ಸೇರಿಸಿ ರುಬ್ಬಿ.
*ಈ ಮಿಶ್ರಣವನ್ನು ನಿಮ್ಮ ಕೂದಲ ಬುಡಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಅದನ್ನು 20-30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ.
 
5. ಮೊಸರು ಮತ್ತು ಜೇನು
* 2 ಚಮಚ ಮೊಸರು ಮತ್ತು 1 ಚಮಚ ಜೇನು ಮತ್ತು ನಿಂಬೆ ರಸವನ್ನು ಸೇರಿಸಿ ಮಿಕ್ಸ್ ಮಾಡಿ.
*ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಅದನ್ನು ಸುಮಾರು 30 ನಿಮಿಷ ಹಾಗೆಯೇ ಬಿಡಿ.
*ನಂತರ ತಣ್ಣನೆಯ ನೀರಿನಿಂದ ತಲೆಸ್ನಾನ ಮಾಡಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಒಮ್ಮೆ ಇದನ್ನು ಮಾಡಿ.
 
6. ಅಲೋವೆರಾ ಅಥವಾ ಲೋಳೆಸರ - ಕೂದಲು ಉದುರುವ ಸಮಸ್ಯೆಗೆ ಮತ್ತು ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಇದೊಂದು ಅತ್ಯುತ್ತಮ ಮನೆ ಮದ್ದಾಗಿದೆ. ಇದು ತಲೆಯ ತುರಿಸುವಿಕೆ ಮತ್ತು ಹೊಟ್ಟಿನ ಸಮಸ್ಯೆಗಳಿಗೂ ಸಹ ಉತ್ತಮ ಔಷಧವಾಗಿದೆ.
 
*ಒಂದು ತುಂಡು ಅಲೋವೆರಾವನ್ನು ತೆಗೆದುಕೊಂಡು ಅದರ ರಸವನ್ನು ಬೇರ್ಪಡಿಸಿ.
*ಅದನ್ನು ನಿಮ್ಮ ಕೂದಲ ಬುಡ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ.
*ಸುಮಾರು ಒಂದು ಗಂಟೆಯ ನಂತರ ತಲೆಸ್ನಾನ ಮಾಡಿ. ಉತ್ತಮ ಪರಿಣಾಮಕ್ಕಾಗಿ ನೀವು ವಾರದಲ್ಲಿ 3-4 ಬಾರಿ ಇದನ್ನು ಪ್ರಯತ್ನಿಸಬಹುದು.
 
7. ಮೆಂತೆ ಕಾಳು - ಮೆಂತೆ ಕಾಳು ಕೂದಲು ಉದುರುವಿಕೆಗೆ ಅತ್ಯುತ್ತಮ ಮನೆಮದ್ದಾಗಿದ್ದು ಇದು ಕೂದಲ ಮರು ಬೆಳವಣಿಗೆಗೆ ಸಹಾಯ ಮಾಡುತ್ತದೆ.
 
*ಮೆಂತೆ ಕಾಳುಗಳನ್ನು ಒಂದು ರಾತ್ರಿ ನೆನೆಸಿಡಿ.
*ನೆನೆಸಿದ ಮೆಂತೆಕಾಳನ್ನು ನುಣ್ಣಗೆ ರುಬ್ಬಿ ಆ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ಕೂದಲ ಬುಡಕ್ಕೆ ಚೆನ್ನಾಗಿ ಹಚ್ಚಿ.
*ಸುಮಾರು 30 ನಿಮಿಷಗಳ ನಂತರ ತಲೆಸ್ನಾನ ಮಾಡಿ. ನೀವು ಯಾವುದೇ ಶ್ಯಾಂಪೂ ಬಳಸುವ ಅಗತ್ಯವಿಲ್ಲ.
*ಉತ್ತಮ ಪರಿಣಾಮಕ್ಕಾಗಿ ಎರಡು ವಾರಕ್ಕೊಮ್ಮೆ ಈ ಮಾಸ್ಕ್ ಮಾಡಿಕೊಳ್ಳಿ.
 
8. ನೆಲ್ಲಿಕಾಯಿ - ಕೂದಲು ಉದುರುವ ಕಾರಣಗಳಲ್ಲಿ ವಿಟಮಿನ್ ಸಿ ಕೊರತೆಯು ಒಂದಾಗಿದೆ. ನೀವು ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸಿದರೆ ಅದು ನಿಮ್ಮ ಕೂದಲು ಉದುರುವಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.
 
*ನೆಲ್ಲಿಕಾಯಿ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ.
*ಅದನ್ನು ನಿಮ್ಮ ಕೂದಲ ಬುಡಕ್ಕೆ ಮತ್ತು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
*ಸುಮಾರು ಒಂದು ಗಂಟೆಯ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ ತಣ್ಣನೆಯ ನೀರಿನಿಂದ ತಲೆ ಸ್ನಾನ ಮಾಡಿ.
 
ನೀವೂ ಸಹ ಕೂದಲು ಉದುರುವಿಕೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಮೇಲಿನವುಗಳಲ್ಲಿ ನಿಮಗೆ ಅನುಕೂಲವಾಗುವ ಸಲಹೆಗಳನ್ನು ಬಳಸಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ