ನೀವು ಮೇಕಪ್‌ಗಳನ್ನು ಹೀಗೂ ತೆಗೆಯಬಹುದು..

ಬುಧವಾರ, 20 ಜೂನ್ 2018 (18:16 IST)
ರಾತ್ರಿ ಮಲಗುವಾಗ ನಿಮ್ಮ ಮುಖದ ಮೇಕಪ್ ಅನ್ನು ತೆಗೆಯುವುದು ಅಗತ್ಯವಾಗಿರುತ್ತದೆ. ಅದಕ್ಕಾಗಿ ಹಲವು ಬಗೆಯ ವೈಪರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆಯಾದರೂ ಅವುಗಳು ನಿಮ್ಮ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದಾಗಿದೆ.

ಆದ್ದರಿಂದ ನೀವೇ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿ ಮೇಕಪ್ ತೆಗೆದುಕೊಳ್ಳುವುದು ಒಳ್ಳೆಯದು. ಈ ಕೆಳಗಿನ ಪರಿಹಾರಗಳನ್ನು ಬಳಸುವುದರಿಂದ ನೀವು ಸುಲಭವಾಗಿ ಮೇಕಪ್ ತೆಗೆದುಕೊಳ್ಳಬಹುದು ಮತ್ತು ನಿಮ್ಮ ತ್ವಚೆಗೂ ಸಹ ಆರೋಗ್ಯಕರವಾಗಿದೆ.
 
*ತೆಂಗಿನ ಎಣ್ಣೆ - 1 ಚಮಚ ತೆಂಗಿನೆಣ್ಣೆಯಿಂದ ನಿಮ್ಮ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ನಂತಹ ನಿಮ್ಮ ಸೋಪು ಅಥವಾ ಫೇಸ್ ವಾಶ್ ಬಳಸಿ ಮುಖವನ್ನು ತೊಳೆದುಕೊಳ್ಳಬೇಕು. ಇದು ನಿಮ್ಮ ಮುಖದಿಂದ ಮೇಕಪ್ ತೆಗೆಯಲು ಸರಳವಾದ ವಿಧಾನವಾಗಿದೆ.
 
*ಸ್ಟೀಮ್ ಅಥವಾ ಬಿಸಿ ನೀರಿನ ಹಬೆ - ಇದು ನಿಮಗೆ ನಂಬಲು ಸಾಧ್ಯವಾಗದಿದ್ದರೂ ನಿಜ. ಬಿಸಿ ನೀರಿನ ಆವಿಯನ್ನು ಬಳಸಿ ಸುಲಭವಾಗಿ ಮುಖದ ಮೇಕಪ್ ಅನ್ನು ತೆಗೆಯಬಹುದಾಗಿದೆ. ಒಂದು ಬೌಲ್‌ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಮುಖಕ್ಕೆ ಅದರ ಆವಿಯನ್ನು 5-6 ನಿಮಿಷ ತೆಗೆದುಕೊಳ್ಳಬೇಕು. ನಂತರ ನೀವು ದಿನವೂ ಬಳಸುವ ಸೋಪಿನಿಂದ ಮುಖವನ್ನು ತೊಳೆದುಕೊಳ್ಳಬೇಕು.
 
*ಬೇಬಿ ಆಯಿಲ್ - ಬೇಬಿ ಆಯಿಲ್ ತೆಂಗಿನೆಣ್ಣೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಇದರಿಂದ ಕೇವಲ ನೀವು ಬಯಸುವ ಭಾಗದ ಮೇಕಪ್ ಅನ್ನೂ ಸಹ ತೆಗೆಯಬಹುದಾಗಿದೆ.
 
*ಹಾಲು - ಸ್ವಲ್ಪ ಹಾಲಿನೊಂದಿಗೆ ನಾಲ್ಕು ಹನಿ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡರೆ ಅದು ಮೇಕಪ್ ತೆಗೆಯಲು ಉತ್ತಮ ಮಾರ್ಗವಾಗಿದೆ. ಹತ್ತಿಯ ಉಂಡೆಯ ಸಹಾಯದಿಂದ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುತ್ತದೆ.
 
*ಸೌತೆಕಾಯಿ - ನಿಮಗೆ ಸಾಕಷ್ಟು ಸಮಯ ಲಭ್ಯವಿದ್ದಾಗ ಸೌತೆಕಾಯಿಯ ಚೂರುಗಳನ್ನು ಮುಖದ ಮೇಲೆ ಇಟ್ಟುಕೊಳ್ಳುವ ಬದಲಾಗಿ ಅದನ್ನು ನಯವಾಗಿ ರುಬ್ಬಿ ಅದಕ್ಕೆ ಸ್ವಲ್ಪ ಒಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಣವನ್ನು ತಯಾರು ಮಾಡಿಕೊಳ್ಳಿ. ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 5-10 ನಿಮಿಷದ ನಂತರ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆಯನ್ನು ಸ್ವಚ್ಛವಾಗಿಸುವುದರೊಂದಿಗೆ ನಯವಾಗಿ, ಹೊಳೆಯುವ ಕಾಂತಿಯುಕ್ತ ತ್ವಚೆಯನ್ನು ನಿಮ್ಮದಾಗಿಸುತ್ತದೆ.
 
*ಅಡುಗೆ ಸೋಡಾ ಮತ್ತು ಜೇನು - ಮೃದುವಾದ ಕಾಟನ್ ಬಟ್ಟೆಯ ಮೇಲೆ ಸ್ವಲ್ಪ ಜೇನು ಮತ್ತು ಅದರ ಮೇಲೆ ಚಿಟಿಕೆ ಅಡುಗೆ ಸೋಡಾವನ್ನು ಹಾಕಿಕೊಳ್ಳಿ. ನಂತರ ಅದರಿಂದ ನಿಮ್ಮ ಮುಖವನ್ನು ನಿಧಾನವಾಗಿ ಉಜ್ಜಿ. ನೀವು ಗಟ್ಟಿಯಾಗಿ ಉಜ್ಜುವ ಅಗತ್ಯವಿರುವುದಿಲ್ಲ. ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಸ್ವಚ್ಛವಾದ ಮತ್ತು ತಾಜಾ ತ್ವಚೆಯು ನಿಮ್ಮದಾಗುತ್ತದೆ.
 
ಮಲಗುವ ಮೊದಲು ಮೇಕಪ್ ತೆಗೆಯುವುದು ಯಾವಾಗಲೂ ಸಮಸ್ಯೆಯಿಂದಲೇ ಕೂಡಿರಬೇಕಾಗಿಲ್ಲ. ಈ ಮೇಕಪ್ ತೆಗೆಯುವ ಪರಿಹಾರಗಳು ನಿಮ್ಮ ಬಜೆಟ್ ಒಳಗೆ ಬರುವುದಲ್ಲದೇ ಸರಳವಾದುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ