ಮಳೆಗಾಲದಲ್ಲಿ ಕೂದಲ ರಕ್ಷಣೆಗೆ ಸಲಹೆಗಳು

ಸೋಮವಾರ, 11 ಜುಲೈ 2016 (11:37 IST)
ಮಳೆಗಾಲದಲ್ಲಿ ನಿಮ್ಮ ಕೂದಲಿಗೆ ವಿಶೇಷ ಕಾಳಜಿಯನ್ನು ತೋರಬೇಕಾಗುತ್ತದೆ. ಕೂದಲನ್ನು ಜಾಸ್ತಿ ಒದ್ದೆಯಾಗಲು ಬಿಡಬೇಡಿ. ಮಳೆನೀರಿನೊಂದಿಗೆ ಕಶ್ಮಲಗಳೂ ತಲೆಕೂದಲಿನೊಂದಿಗೆ ಸೇರಿ ಬುಡದಲ್ಲಿ ಹಾಗೆಯೇ ಉಳಿಯುತ್ತದೆ. ಹಾಗಾಗಿಯೇ ಮಳೆಯಲ್ಲಿ ನೆನೆದರೆ ತಲೆ ತುರಿಸಲು ಆರಂಭವಾಗುತ್ತದೆ. ಮಳೆಗಾಲದ ಸೂರ್ಯನ ಬಿಸಿಲು ಹಾಗೂ ಮಳೆಯ ಹನಿ ಇವುಗಳರಡೂ ಜತೆಯಾಗಿ ಕೂದಲನ್ನು ಹಾಳುಮಾಡುತ್ತದೆ. ಹಾಗಾಗಿ ಯಾವಾಗಲೂ ಮಳೆಗಾಲದಲ್ಲಿ ರೇನ್ ಕೋಟ್ ಅಥವಾ ಒಂದು ಉತ್ತಮ ಛತ್ರಿಯನ್ನು ಬಳಸಿ.

ಮಳೆಯಿಂದ ಒದ್ದೆಯಾದ ಕೂದಲನ್ನು ಖಾರವಲ್ಲದ ಅಥವಾ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಬೇಕಿದ್ದರೆ ಕಂಡೀಶನರ್ ಕೂಡಾ ಬಳಸಿ. ಉದ್ದ ಕೂದಲಾಗಿದ್ದರೆ, ಒದ್ದೆಯಾದ ತಕ್ಷಣ ಒಣಗಿಸಿ. ಇಲ್ಲವಾದರೆ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪ್ರವಾಸ ಹೋಗುವಾಗಲೆಲ್ಲ ಒಂಡು ಟರ್ಕಿ ಟವೆಲ್ ಹಾಗೂ ಹೇರ್‌ಡ್ರಯರ್ ಇಟ್ಟುಕೊಂಡಿರುವುದು ಒಳ್ಳೆಯದು.
 
ತಲೆಹೊಟ್ಟು 
 
ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಬಂದರೆ, ಎಣ್ಣೆಯನ್ನು ಬಿಸಿ ಮಾಡಿ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಒಂದೆರಡು ಗಂಟೆ ಬಿಟ್ಟು ತೊಳೆದರೆ ತಲೆಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಜತೆಗೆ ಕೂದಲನ್ನು ಆರೋಗ್ಯವಾಗಿಡಲು ಯಾವಾಗಲೂ ಮಲಗುವ ಮುನ್ನ ತಲೆಗೇನೂ ಹಚ್ಚಿಕೊಳ್ಳದೆ ಹಾಗೆಯೇ ಸ್ವಲ್ಪ ಹೊತ್ತು ಬೆರಳ ತುದಿಯಿಂದ ಸುರುಳಿಯಾಕಾರದಲ್ಲಿ ತಲೆಕೂದಲ ಬುಡಕ್ಕೆ ಮಸಾಜ್ ಮಾಡಿದರೆ ತಲೆಬುಡಕ್ಕೆ ರಕ್ತುಪೂರಣವಾಗುತ್ತದೆ. ಹಾಗೂ ಕೂದಲು ಆರೋಗ್ಯವಾಗುತ್ತದೆ.
 

ವೆಬ್ದುನಿಯಾವನ್ನು ಓದಿ