ಕೂದಲು ಉದುರುವುದನ್ನು ತಡೆಯಲು ಸರಳ ಉಪಾಯಗಳು

ಶನಿವಾರ, 25 ಜೂನ್ 2016 (15:02 IST)
ಬಹಳಷ್ಟು ಮಂದಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ.  ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ. ಹಾಗಾದರೆ ಕೂದಲನ್ನು ಹೇಗೆ ಸಂರಕ್ಷಿಸಬಹುದು ಬೋಳುತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ ನಿಮ್ಮಲ್ಲೇ ಎದ್ದ ಪ್ರಶ್ನೆಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಪರಿಹಾರ ಉಪಾಯಗಳು ಇಲ್ಲಿವೆ. ಸ್ವೀಕರಿಸುವುದು ನಿಮಗೆ ಬಿಟ್ಟಿದ್ದು.

1. ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲು ಉದುರುವುದೂ ಕೂಡಾ ಕಡಿಮೆಯಾಗುತ್ತದೆ.
 
2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.
 
3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.
 
4. ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
 
5. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.
 
6. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
 
7. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
 
8. ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
 
9. ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
 
10. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ