ಬೆಂಗಳೂರು: ಲಿವರ್ ಗೆ ಸಂಬಂಧಪಟ್ಟ ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಸದ್ಯದಲ್ಲೇ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಅಮೆರಿಕಾಗೆ ತೆರಳುವ ಮೊದಲು ಅವರು ಈ ಒಂದು ಕೆಲಸ ಮಾಡಲಿದ್ದಾರೆ.
ನಟ ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾ ರಿಲೀಸ್ ಬಳಿಕ ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದರು. ಅದರಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಗೆ ಮೊದಲು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ಮುಡಿ ಕೊಟ್ಟು ಹರಕೆ ತೀರಿಸಿಕೊಂಡಿದ್ದಾರೆ.
ಜನವರಿಯಲ್ಲಿ ಅವರು ಅಮೆರಿಕಾಗೆ ತೆರಳಿದ್ದು, ಒಂದು ತಿಂಗಳು ಅಲ್ಲಿಯೇ ಇದ್ದು ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಇದಕ್ಕೆ ಮೊದಲು ಅವರು ಅಮಿತಾಭ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರಂತೆ.
ಬಿಗ್ ಬಿ ನಡೆಸಿಕೊಡುವ ಕೆಬಿಸಿ ಶೋಗೆ ಅದರದ್ದೇ ಆದ ಗೌರವವಿದೆ. ಈ ಶೋನಲ್ಲಿ ಕಾಣಿಸಿಕೊಳ್ಳಲು ಸೆಲೆಬ್ರಿಟಿಗಳೂ ಕಾಯುತ್ತಿರುತ್ತಾರೆ. ಇದೀಗ ಶಿವಣ್ಣನಿಗೂ ಆ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ಕಾರ್ಯಕ್ರಮ ಪ್ರಸಾರವಾಗಲಿದೆ. ಅಮೆರಿಕಾಗೆ ತೆರಳುವ ಮೊದಲು ತಮ್ಮ ಇಷ್ಟದ ಶೋನಲ್ಲಿ ಪಾಲ್ಗೊಂಡು ತೆರಳುತ್ತಿದ್ದಾರೆ ಶಿವಣ್ಣ.