ದಿನದಾರಂಭ, ದಣಿವಾರಿಸಿಕೊಳ್ಳಲು ಒಂದ್ಕಪ್ ಕಾಫಿ!

ಅದು ಎಕ್ಸ್‌ಪ್ರೆಸೋ ಇರಲಿ, ಅಥವಾ ಕೆಫೆಚೀನೋ... ಕಾಫಿಯ ಆಹ್ಲಾದಕರ ಸ್ವಾದ ಮತ್ತು ಸುವಾಸನೆಯೇ ನಿಮ್ಮ ಆಯಾಸವನ್ನು ಚಿಟಿಕೆ ಹೊಡೆದಂತೆ ನಿವಾರಿಸಬಲ್ಲುದು. ಅಂಥ ಶಕ್ತಿ ಕಾಫಿಗಿದೆ. ಕಾಫಿಪ್ರಿಯರಿಗಂತೂ ಕಾಫಿ ಜತೆ ಸೇರಿಕೊಂಡ ವಿಷಯ ಯಾವುದೇ ಇರಲಿ, ಅದು ಅತ್ಯಂತ ಇಷ್ಟವಾಗುತ್ತದೆ. ಇಡೀ ಜಗತ್ತಿನಲ್ಲೇ ಕಾಫಿ ಇಷ್ಟೊಂದು ಜನಪ್ರಿಯವಾಗಲು ಏನು ಕಾರಣ ಅಂತ ಯೋಚಿಸಿದ್ದೀರಾ? ಕಾಫಿಯ ಸ್ವಾದದ ಜತೆಜತೆಗೇ, ಅದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ದೊರೆಯೋ ಮಜಾವೇ ಬೇರೆ. ಬನ್ನಿ, ಕಾಫಿಗೆ ಸಂಬಂಧಿಸಿದ ಕೆಲವೊಂದು ಆಸಕ್ತಿಕರ ವಿಷಯಗಳನ್ನು ತಿಳಿದುಕೊಳ್ಳೋಣ...

* ಇಡೀ ವಿಶ್ವದಲ್ಲಿ ಕಾಫಿಯನ್ನು ಅತ್ಯಂತ ಹೆಚ್ಚು ಮೆಚ್ಚಿಕೊಳ್ಳುವ ದೇಶ ಯಾವುದು ಅಂತ ಗೊತ್ತಿದೆಯಾ? ಹೌದು. ವಿಶ್ವದಲ್ಲಿ ಕಾಫಿಯನ್ನು ಅತಿ ಹೆಚ್ಚು ಸೇವಿಸುವ ರಾಷ್ಟ್ರ ಅಮೆರಿಕ. ಅಮೆರಿಕದ ಜನಸಂಖ್ಯೆಯಲ್ಲಿ ಐದರಲ್ಲಿ ನಾಲ್ಕು ಮಂದಿ ಬೆಳಗ್ಗೆ ಕಣ್ಣು ಬಿಡುವುದೇ ಕಾಫಿಯ ರುಚಿ ನೋಡಿದ ಬಳಿಕವೇ! ಅಮೆರಿಕದ ನಂತರದ ಸ್ಥಾನದಲ್ಲಿರುವುದು ಫ್ರಾನ್ಸ್ ಮತ್ತು ಜರ್ಮನಿ. ಇಡೀ ವಿಶ್ವದಲ್ಲಿ ಈ ಮೂರು ರಾಷ್ಟ್ರಗಳ ಕಾಫಿ ಸೇವನೆ ಪ್ರಮಾಣವೇ ಒಟ್ಟು ಕಾಫೀ ಸೇವನೆಯ ಶೇ.65ರಷ್ಟು ಅಂದರೆ... ಅವರ ಕಾಫಿ ಪ್ರಿಯತೆ ಎಷ್ಟೆಂಬುದು ಅರಿವಿಗೆ ಬಂದೀತು.

* ಕಾಫಿಯ ಜನಪ್ರಿಯತೆ ಎಷ್ಟಿದೆಯೆಂದರೆ, ಕೆಲವು ದೇಶಗಳಲ್ಲಿ ಕಾಫಿ-ದಿನ ಎಂದು ಪ್ರತ್ಯೇಕವಾದ ದಿನವೊಂದಿದ್ದು, ಅಂದು ರಜೆಯನ್ನೂ ಸಾರಲಾಗುತ್ತದೆಯಂತೆ. ಅದುವೇ ಕಾಫಿ-ಡೇ. ಕೋಸ್ಟಾರಿಕಾದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 12, ಐರ್ಲೆಂಡಿನಲ್ಲಿ ಸೆಪ್ಟೆಂಬರ್ 19 ಹಾಗೂ ಜಪಾನಿನಲ್ಲಿ ಅಕ್ಟೋಬರ್ 1ನ್ನು ಕಾಫೀ-ಡೇ ಆಗಿ ಅಧಿಕೃತವಾಗಿ ಆಚರಿಸಲಾಗುತ್ತಿದೆ.

* ಪ್ರಸಕ್ತ ಸನ್ನಿವೇಶದಲ್ಲಿ ಕಾಫೀಗೆ ಸಂಬಂಧಿಸಿದ ಉದ್ಯೋಗ ಕ್ಷೇತ್ರದಲ್ಲಿ ವಿಶ್ವಾದ್ಯಂತ 25 ದಶಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ.

* ನೀವು ಕೃಷಿಕರಾಗಿದ್ದರೆ, ಈ ಮಾಹಿತಿ ಇಷ್ಟವಾದೀತು. ನಿಮ್ಮ ಜಮೀನಿನಲ್ಲಿ ಯಾವುದೇ ಗಿಡಗಳ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ ಎಂದಾಗಿದ್ದರೆ, ಅವುಗಳಿಗೆ ಉಣಿಸುವ ಗೊಬ್ಬರದ ಜತೆಗೆ ಕಾಫಿ ಬೀಜವನ್ನೂ ಸೇರಿಸಿ ನೋಡಿ. ಗಿಡಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ.

ಹಾಗಿದ್ದರೆ, ಇನ್ನು ಮುಂದೆ ಕಾಫೀ ಕಪ್ ಜತೆಗೆ ದಿನವನ್ನು ಆರಂಭಿಸಲು ಅಥವಾ ದಣಿವಾರಿಸಿಕೊಳ್ಳಲು ಕುಳಿತುಕೊಳ್ಳುತ್ತೀರೆಂದಾದರೆ, ಕಾಫೀಯ ಉಪಯೋಗ ಮತ್ತು ಅದರ ಬಳಕೆಯ ಕುರಿತಾದ ರಂಜನೀಯ ಮಾಹಿತಿಗಳನ್ನೊಮ್ಮೆ ನೆನಪಿಸಿಕೊಳ್ಳಿ. ಕಾಫಿಯ ಸ್ವಾದ ಮತ್ತಷ್ಟು ರುಚಿಯಾಗಿರುತ್ತದೆ!

ವೆಬ್ದುನಿಯಾವನ್ನು ಓದಿ