ಕಾಫಿ ಬೀಜದ ಕ್ಯೂರಿಂಗ್ ವಿಧಾನ

ಎಸ್ಟೇಟ್‌ನಿಂದ, ಸಂಸ್ಕರಿತ ಕಾಫೀ ಬೀಜಗಳನ್ನು ಕ್ಯೂರಿಂಗ್‌ಗಾಗಿ ರವಾನಿಸಲಾಗುತ್ತದೆ. ಅಲ್ಲಿ ಹಸಿರು ಕಾಫಿಯನ್ನು ಮಾರುಕಟ್ಟೆಗೆ ಸಜ್ಜುಗೊಳಿಸಲು ಅಂತಿಮಸ್ಪರ್ಶ ನೀಡಲಾಗುತ್ತದೆ.

ಕ್ಯೂರಿಂಗ್ ವೇಳೆ ಕಾಫೀ ಬೀಜದ ಉಸ್ತುವಾರಿಯನ್ನು ಯಂತ್ರಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ನೋಡಿಕೊಳ್ಳುತ್ತವೆ. ಕ್ಯೂರಿಂಗ್ ಪ್ರಕ್ರಿಯೆಯ ಅತ್ಯಂತ ಮಹತ್ವದ ಹಂತವೆಂದರೆ, ಪೊರೆಯಂತಿರುವ ಹೊದಿಕೆ ಮತ್ತು ತೆಳುವಾದ ರಜತವರ್ಣದ ಕವಚವನ್ನು ತೆಗೆದು, ಬೀಜವನ್ನು ಪ್ರತ್ಯೇಕಿಸುವುದು. ಇದನ್ನು ವಾಣಿಜ್ಯಕವಾಗಿ ಗ್ರೀನ್ ಕಾಫೀ ಎಂದು ಕರೆಯಲಾಗುತ್ತದೆ. ಹೀಗೆ ಬೇರ್ಪಡಿಸಿದ ಕಾಫೀ ಬೀಜಗಳನ್ನು ಗುಣಮಟ್ಟದ ಆಧಾರದಲ್ಲಿ ಗ್ರೇಡಿಂಗ್ ಮಾಡಿ, ಪ್ರತ್ಯೇಕಿಸಲಾಗುತ್ತದೆ, ಮತ್ತು ಗುಣಮಟ್ಟ ದೃಢೀಕರಣವನ್ನೂ ಮಾಡಲಾಗುತ್ತದೆ. ಕ್ಯೂರಿಂಗ್ ಕಾರ್ಯದಲ್ಲಿ ಗೋದಾಮಿನಲ್ಲಿಸುರುವುದು, ಸಂಗ್ರಹಣೆ, ಸ್ವಚ್ಛಗೊಳಿಸುವುದು, ಧೂಳು ತೆಗೆಯುವುದು, ಪಾಲಿಶ್ ಮಾಡುವುದು ಮತ್ತು ಗ್ರೇಡಿಂಗ್ ಇತ್ಯಾದಿ ವಿಧಾನಗಳಿರುತ್ತವೆ.

ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಪೂರಕವಾಗಿರಲು ಕಾಫೀ ಮಂಡಳಿ ರೂಪಿಸಿರುವ ಮಾದರಿಯ ಅನುಗುಣವಾಗಿ ಭಾರತದಲ್ಲಿ ಗ್ರೇಡಿಂಗ್ ಮಾಡಲಾಗುತ್ತದೆ. ಬೀಜದ ಗಾತ್ರ ಮತ್ತು ಸಾಂದ್ರತೆಯ ಆಧಾರದಲ್ಲಿ ಗ್ರೇಡಿಂಗ್ ಮಾಡಲಾಗುತ್ತದೆ. ಬೀಜಗಳನ್ನು ವಿಭಿನ್ನ ಗ್ರೇಡ್‌ಗಳಾಗಿ ವರ್ಗೀಕರಿಸಲು ನಿರ್ದಿಷ್ಟ ಗಾತ್ರಗಳಿಗೆ ಅನುಗುಣವಾದ ಜರಡಿಗಳಲ್ಲಿ ಶೋಧಿಸಲಾಗುತ್ತದೆ. ವಿಭಿನ್ನ ಖರೀದಿದಾರರ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಗ್ರೇಡ್‌ಗಳು ಕೂಡ ಲಭ್ಯವಾಗುವಂತೆ ಮಾಡಲಾಗುತ್ತದೆ.

ಕೆಲವು ರಾಷ್ಟ್ರಗಳು ತಮ್ಮದೇ ವಿಧಾನವನ್ನು ಅನುಸರಿಸಿ ಗ್ರೇಡಿಂಗ್ ಕೈಗೊಳ್ಳುತ್ತವೆ, ಮತ್ತು ವಿವಿಧ ರಾಷ್ಟ್ರೀಯ ಮತ್ತು/ಅಥವಾ ಖಾಸಗಿ ಸಂಸ್ಥೆಗಳು ಮತ್ತು ಕಂಪನಿಗಳು ಕೂಡ, ಪರೀಕ್ಷೆ, ಅಥವಾ ಲಿಕರಿಂಗ್, ಹಾಗೂ ಗ್ರೇಡಿಂಗ್‌ಗೆ ತಮ್ಮದೇ ಆದ ಮೂಲ ಸೌಕರ್ಯಗಳನ್ನು ಹೊಂದಿರುತ್ತವೆ.

ವೆಬ್ದುನಿಯಾವನ್ನು ಓದಿ