ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ : ಡಾ.ಕೆ. ಸುಧಾಕರ್
ಬುಧವಾರ, 1 ಸೆಪ್ಟಂಬರ್ 2021 (09:36 IST)
ಬೆಂಗಳೂರು: ನೆರೆಯ ಕೇರಳದಿಂದ ಕರ್ನಾಟಕ ಪ್ರವೇಶಿಸುವ ಜನರು ಕರೋನ ಲಸಿಕೆ ಪಡೆದರೂ ಕೂಡ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ ಮತ್ತು ನಕಾರಾತ್ಮಕ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿರಬೇಕು ಎಂದು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅವರು ಮಾತನಾಡಿ, 'ಕೇರಳದಿಂದ ಬರುವ ಪ್ರಯಾಣಿಕರು ಲಸಿಕೆಗಳನ್ನು ತೆಗೆದುಕೊಂಡಿರಲಿ ಅಥವಾ ನಕಾರಾತ್ಮಕ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿರಲಿ, ಅವರು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಉಳಿಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದು ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
ಈ ಕ್ರಮವು ಕೇರಳದ ವಿಮಾನ ಪ್ರಯಾಣಿಕರಿಗೂ ಅನ್ವಯಿಸುತ್ತದೆ ಅಂತ ಅವರು ಇದೇ ವೇಳೇ ತಿಳಿಸಿದ್ದು, ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರುವವರು ಹೋಟೆಲ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಅವರನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಸಚಿವ ಸುಧಾಕರ್ ಇದೇ ವೇಳೆ ತಮ್ಮ ಮಾತನ್ನು ಮುಂದುವರೆಸಿ, ಕೇರಳದ ಗಡಿಯಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೋವಿಡ್ ತಡೆಗಟ್ಟುವ ಅಭಿಯಾನವನ್ನು ಮತ್ತಷ್ಟು ಬಲಪಡಿಸುವುದು ಹೇಗೆ ಎಂಬುದರ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ಸರ್ಕಾರ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ ಅಂತ ಹೇಳಿದರು.