ಪಾನ್ ಮಸಾಲ ತಿನ್ನುವ ಆಸೆಯಿಂದ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡ ಕೊರೋನಾ ಸೋಂಕಿತ
ಮಂಗಳವಾರ, 14 ಜುಲೈ 2020 (09:45 IST)
ಲಕ್ನೋ: ಹಲವು ದಿನಗಳಿಂದ ಕ್ವಾರಂಟೈನ್ ನಲ್ಲಿ ಕಳೆದು ಆತನಿಗೂ ಸಾಕಾಗಿ ಹೋಗಿತ್ತು. ಕಣ್ಣ ಮುಂದೆ ತನ್ನ ಇಷ್ಟದ ಪಾನ್ ಮಸಾಲ ಕುಣಿದಾಡುತ್ತಿತ್ತು. ಹೀಗಾಗಿ ಹೇಳದೇ ಕೇಳದೇ ಆ ಕೊರೋನಾ ಸೋಂಕಿತ ತಪ್ಪಿಸಿಕೊಂಡಿದ್ದಾನೆ.
ಆಗ್ರಾದ ಎಸ್ ಎನ್ ಮೆಡಿಕಲ್ ಕಾಲೇಜಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಪಾನ್ ಮಸಾಲ ತಿನ್ನುವ ಬಯಕೆಯಿಂದ ಕೊರೋನಾ ಸೋಂಕಿತನೊಬ್ಬ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ತನ್ನ ಕುಟುಂಬಸ್ಥರನ್ನೆಲ್ಲಾ ಭೇಟಿ ಮಾಡಿಕೊಂಡು ಆತಂಕ ಸೃಷ್ಟಿಸಿದ್ದಾನೆ.
ಆಸ್ಪತ್ರೆಯಿಂದ ತಪ್ಪಿಸಿಕೊಂಡ ವ್ಯಕ್ತಿ ಹಾಗೋ ಹೀಗೋ ಪಾನ್ ಮಸಾಲ ಖರೀದಿಸಿ ತನ್ನ ಪಾಕೆಟ್ ನಲ್ಲಿ ತುಂಬಿಕೊಂಡಿದ್ದ. ಬಳಿಕ ತನ್ನ ಗೆಳೆಯರು, ಕುಟುಂಬಸ್ಥರ ಮನೆಗೆ ಭೇಟಿ ನೀಡಿದ್ದ. ಮೊದಲಿಗೆ ಅವರಿಗೆ ಈತನಿಗೆ ಕೊರೋನಾ ಇರುವ ವಿಚಾರ ಗೊತ್ತಿರಲಿಲ್ಲ. ಹೀಗಾಗಿ ಅವರೂ ಆತನನ್ನು ಸ್ವಾಗತಿಸಿದ್ದರು. ಆದರೆ ಬಳಿಕ ತನಗೆ ಕೊರೋನಾ ಇದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮನೆಯವರಿಗೆ ಮನವಿ ಮಾಡಿದ್ದ.
ಇದೀಗ ಆತನನ್ನು ಮತ್ತೆ ಪತ್ತೆ ಮಾಡಿರುವ ಎಸ್ಎನ್ ಮೆಡಿಕಲ್ ಕಾಲೇಜು ಅಧಿಕಾರಿಗಳು ಆತನನ್ನು ಐಸೋಲೇಷನ್ ವಾರ್ಡ್ ನಲ್ಲಿರಿಸಿದ್ದು, ಆತನ ಮೇಲೆ ಹದ್ದಿನಗಣ್ಣಿರಿಸಿದ್ದಾರೆ. ಈಗ ಆತನ ಕುಟುಂಬದವರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.