ಬೆಂಗಳೂರು: ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಹೇರಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ದಿನಗೂಲಿಯವರು, ವ್ಯಾಪಾರಿಗಳು, ಆಟೋ ಚಾಲಕರು ಮುಂತಾದವರು ಮಾತ್ರ ಲಾಕ್ ಡೌನ್ ಮಾಡಬೇಡಿ ಎಂದು ಅಂಗಲಾಚುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಲಾಕ್ ಡೌನ್ ಆದ ಬಳಿಕ ಇಂತಹ ಉದ್ಯೋಗಿಗಳ ಬದುಕು ಮೂರಾಬಟ್ಟೆಯಾಗಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರಿಗಳಿಗೆ ಈಗ ಮೊದಲಿನ ವ್ಯಾಪಾರವಾಗುತ್ತಿಲ್ಲ. ಆಟೋ ಹತ್ತಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಸರ್ಕಾರದ ಪರಿಹಾರ ಕೈಗೆ ಬಂದಿಲ್ಲ. ಹೀಗಿರುವಾಗ ದಿನ ನಡೆಸುವುದು ಕಷ್ಟವಾಗಿದೆ.
ಇನ್ನೇನು ಹೊಸದಾಗಿ ಎಲ್ಲವನ್ನೂ ಆರಂಭಿಸಿ ಬದುಕು ಕಟ್ಟಿಕೊಳ್ಳಲು ನೋಡುತ್ತಿರುವಾಗ ಮತ್ತೆ ಲಾಕ್ ಡೌನ್ ಹೇರಿದರೆ ಚೇತರಿಸಿಕೊಳ್ಳುವುದು ಕಷ್ಟ ಎಂಬುದು ವ್ಯಾಪಾರಸ್ಥರ ಅಳಲು. ಹೀಗಾಗಿ ಈ ವರ್ಗದ ಜನ ಮತ್ತೆ ಲಾಕ್ ಡೌನ್ ಮಾಡಿ ನಮ್ಮ ಹೊಟ್ಟೆಗೆ ಹೊಡೆಯಬೇಡಿ ಎಂದು ಮನವಿ ಮಾಡುತ್ತಿದ್ದಾರೆ.