ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.
ವಿಶೇಷವೆಂದರೆ ಪಂದ್ಯವನ್ನೇ ಆಡದ ಆಟಗಾರರೇ ಗಾಯಕ್ಕೊಳಗಾಗುತ್ತಿರುವುದು ವಿಪರ್ಯಾಸ. ಸರಣಿಯ ಆರಂಭಕ್ಕೂ ಮೊದಲ ಅಭ್ಯಾಸ ಪಂದ್ಯವಾಡುವಾಗ ಪೃಥ್ವಿ ಶಾ ಗಾಯಗೊಂಡಿದ್ದರು. ಅದಾದ ಬಳಿಕ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಗಾಯಾಳುಗಳ ಲಿಸ್ಟ್ ಗೆ ಸೇರ್ಪಡೆಯಾಗಿದ್ದರು.
ಇದೀಗ ಪಂದ್ಯವೇ ಆಡದ ರವೀಂದ್ರ ಜಡೇಜಾ ಗಾಯದ ಲಿಸ್ಟ್ ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಅಶ್ವಿನ್ ಮತ್ತು ಜಡೇಜಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ ಗಳೇ ಇಲ್ಲದೆ ಆಡಿದ್ದ ಭಾರತ ಮೂರನೇ ಪಂದ್ಯದಲ್ಲಿ ಚಿನಾಮನ್ ಬೌಲರ್ ಕುಲದೀಪ್ ಯಾದವ್ ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇನ್ನು, ರೋಹಿತ್ ಶರ್ಮಾ ಆಡುವ ಬಗ್ಗೆ ಇನ್ನೂ ಖಚಿತ ಮಾಹಿತಿ ಬಂದಿಲ್ಲ.
ಎಲ್ಲಕ್ಕಿಂತ ಹೆಚ್ಚಿಗೆ ಅನುಮಾನ ಹುಟ್ಟಿಸುತ್ತಿರುವುದು ಕೋಚ್ ರವಿಶಾಸ್ತ್ರಿ ಹೇಳಿಕೆ. ಎರಡನೇ ಟೆಸ್ಟ್ ಮುಗಿದ ಬಳಿಕ ನಾಯಕ ಕೊಹ್ಲಿ ಜಡೇಜಾರನ್ನು ಆಡಿಸುವ ಬಗ್ಗೆ ನಾವು ಯೋಚನೆಯೇ ಮಾಡಿರಲಿಲ್ಲ ಎಂದಿದ್ದರು.
ಆದರೆ ಇದೀಗ ರವಿಶಾಸ್ತ್ರಿ ಜಡೇಜಾ ಆಸ್ಟ್ರೇಲಿಯಾ ಪ್ರವಾಸಕ್ಕೂ ಮೊದಲು ಆರೋಗ್ಯ ಸಮಸ್ಯೆಯೊಂದಕ್ಕೆ ಇಂಜೆಕ್ಷನ್ ತೆಗೆದುಕೊಂಡಿದ್ದರು. ಅದರಿಂದ ಅವರು ಮಾಂಸಖಂಡಗಳ ಸಮಸ್ಯೆಗೆ ತುತ್ತಾಗಿದ್ದಾರೆ. ಅವರು ಪೂರ್ಣವಾಗಿ ಫಿಟ್ ಅಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ಅವರು ಫಿಟ್ ಅಲ್ಲದೇ ಹೋಗಿದ್ದರೆ ದ್ವಿತೀಯ ಟೆಸ್ಟ್ ವೇಳೆ ಅವರನ್ನು ಬದಲಿ ಕ್ಷೇತ್ರ ರಕ್ಷಕನಾಗಿ ಕಣಕ್ಕಿಳಿದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಕೋಚ್ ಹೇಳಿಕೆಗೂ ನಾಯಕನ ಹೇಳಿಕೆಗೂ ಸಂಬಂಧವೇ ಇಲ್ಲ.
ಅದೂ ಅಲ್ಲದೆ, ದ್ವಿತೀಯ ಟೆಸ್ಟ್ ವೇಳೆ ಇಶಾಂತ್ ಮತ್ತು ಜಡೇಜಾ ನಡುವಿನ ಬಹಿರಂಗ ಕಿತ್ತಾಟದ ವೇಳೆ ಇಶಾಂತ್ ಜಡೇಜಾಗೆ ನಿನಗೆ ಕೋಪವಿದ್ದರೆ ನನ್ನ ಬಳಿ ತೋರಿಸಬೇಡ ಎಂದಿದ್ದರು. ಇದು ತಂಡದೊಳಗೇ ನಡೆಯುತ್ತಿರುವ ಮುಸುಕಿನ ಗುದ್ದಾಟದ ಲಕ್ಷಣವೇ ಎಂಬ ಅನುಮಾನ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ