ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕ: ನಿತೀಶ್‌ ಕುಮಾರ್‌ ರೆಡ್ಡಿಗೆ ₹25 ಲಕ್ಷ ಬಹುಮಾನ ಘೋಷಿಸಿದ ಆಂಧ್ರ

Sampriya

ಶನಿವಾರ, 28 ಡಿಸೆಂಬರ್ 2024 (20:16 IST)
Photo Courtesy X
ನವದೆಹಲಿ: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸುವ ಮೂಲಕ, ಭಾರತವನ್ನು ಫಾಲೋಆನ್‌ ಭೀತಿಯಿಂದ ಪಾರು ಮಾಡಿದ ಭಾರತದ ನಿತೀಶ್‌ ಕುಮಾರ್ ರೆಡ್ಡಿ ಅವರಿಗೆ ಆಂಧ್ರ ಕ್ರಿಕೆಟ್‌ ಸಂಸ್ಥೆ  ₹ 25 ಲಕ್ಷ ಬಹುಮಾನ ಘೋಷಿಸಿದೆ.

ಬಹುಮಾನ ಘೋಷಣೆ ಕುರಿತು ಎಸಿಎ ಅಧ್ಯಕ್ಷ ಕೆಸಿನೇನಿ ಶಿವನಾಥ್‌ ಅವರು ಹೇಳಿಕೆ ನೀಡಿದ್ದಾರೆ. 'ಆಂಧ್ರ ಕ್ರಿಕೆಟ್‌ ಸಂಸ್ಥೆಯ ಪಾಲಿಗೆ ಇದು ಸುದೈವದ ದಿನ ಹಾಗೂ ಅತ್ಯಂತ ಸಂತಸದ ಕ್ಷಣ. ಆಂಧ್ರದ ಹುಡುಗನೊಬ್ಬ ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಟಿ20 ಮಾದರಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ. ಅದರ ಗೌರವಾರ್ಥವಾಗಿ ಆಂಧ್ರ ಕ್ರಿಕೆಟ್‌ ಸಂಸ್ಥೆಯು ನಿತೀಶ್‌ ಕುಮಾರ್‌ ರೆಡ್ಡಿಗೆ ₹ 25 ಲಕ್ಷ ಬಹುಮಾನ ನೀಡುತ್ತಿದೆ' ಎಂದು ತಿಳಿಸಿದ್ದಾರೆ.

ಬಾರ್ಡರ್‌ ಗಾವಸ್ಕರ್‌ ಟೆಸ್ಟ್‌ ಸರಣಿಯ 4ನೇ ಪಂದ್ಯವು ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿದ್ದು, ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 474 ರನ್‌ ಗಳಿಸಿದೆ. ಇದಕ್ಕುತ್ತರವಾಗಿ ಟೀಂ ಇಂಡಿಯಾ, ಮೂರು ದಿನಗಳ ಆಟದ ಅಂತ್ಯಕ್ಕೆ 9 ವಿಕೆಟ್‌ಗೆ 358 ರನ್ ಕಲೆಹಾಕಿದೆ.

191 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಇಳಿದ ರೆಡ್ಡಿ, ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. ವಾಷಿಂಗ್ಟನ್‌ ಸುಂದರ್‌ (50 ರನ್‌) ಅವರೊಂದಿಗೆ 127 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಆ ಮೂಲಕ ಭಾರತ ಕನಿಷ್ಠ ಮೊತ್ತಕ್ಕೆ ಕುಸಿಯದಂತೆ ಹಾಗೂ ಫಾಲೋಆನ್‌ ಭೀತಿಯಿಂದ ಪಾರು ಮಾಡಿದರು.

176 ಎಸೆತಗಳನ್ನು ಎದುರಿಸಿದ ರೆಡ್ಡಿ, 105 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಅವರೊಂದಿಗೆ, ಮೊಹಮ್ಮದ್ ಸಿರಾಜ್‌ (2 ರನ್‌) 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 116 ರನ್‌ ಗಳಿಸಬೇಕಿದೆ.

ಆತಿಥೇಯ ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಸ್ಕಾಟ್‌ ಬೊಲ್ಯಾಂಡ್‌ ಹಾಗೂ ಸ್ಪಿನ್ನರ್‌ ನೇಥನ್‌ ಲಯನ್‌ ಅವರಂತಹ ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ 21 ವರ್ಷದ ಆಟಗಾರನನ್ನು, ಕ್ರಿಕೆಟ್ ದಿಗ್ಗಜ ಸುನೀಲ್‌ ಗವಾಸ್ಕರ್‌ ಸೇರಿದಂತೆ ಹಲವು ಖ್ಯಾತನಾಮರು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ