ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ನಾಳೆ ಬೇಗನೇ ಶುರುವಾಗಲಿದೆ. ಅದಕ್ಕೆ ಕಾರಣವೇನು ಗೊತ್ತಾ?
ಇಂದು ಪಂದ್ಯದ ಮೂರನೇ ದಿನ ಭಾರತ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇದರಿಂದಾಗಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಹಿನ್ನಡೆ ದಾಟಲು ಇನ್ನೂ 116 ರನ್ ಗಳಿಸಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯ.
ಇಂದು ಮೂರನೇ ದಿನದಾಟಕ್ಕೆ ಎರಡು ಬಾರಿ ಮಳೆ ಅಡಚಣೆಯಾಗಿತ್ತು. ಕೊನೆಗೆ ಭಾರೀ ಮಳೆಯಿಂದಾಗಿ ಮೂರನೇ ದಿನದಾಟವನ್ನು ನಿಗದಿಗಿಂತ ಮೊದಲೇ ನಿಲ್ಲಿಸಲಾಗಿತ್ತು. ಹೀಗಾಗಿ ಓವರ್ ಗಳ ಸಂಖ್ಯೆ ಪೂರ್ಣಗೊಂಡಿರಲಿಲ್ಲ.
ಇದರಿಂದಾಗಿ ನಾಳೆ ಬೇಗನೇ ಆಟ ಆರಂಭಿಸಲು ಅಂಪಾಯರ್ ಗಳು ತೀರ್ಮಾನಿಸಿದ್ದಾರೆ. ಕಳೆದ ಮೂರೂ ದಿನ ಭಾರತೀಯ ಕಾಲಮಾನ ಪ್ರಕಾರ ಮುಂಜಾನೆ 5 ಗಂಟೆಗೆ ಪಂದ್ಯ ಆರಂಭವಾಗಿತ್ತು. ಆದರೆ ನಾಳೆ 4.30 ಕ್ಕೇ ಆರಂಭವಾಗಲಿದೆ.
ಇಂದು ಕಡಿತಗೊಂಡಿರುವ ಓವರ್ ಗಳ ಸಂಖ್ಯೆ ಸಮ ಮಾಡಲು ಅರ್ಧಗಂಟೆ ಬೇಗ ಆಟ ಆರಂಭವಾಗಲಿದೆ. ನಾಳೆಯೂ ಪಂದ್ಯಕ್ಕೆ ವರುಣ ಅವಕೃಪೆ ತೋರಿದರೆ ಮತ್ತೆ ಪೂರ್ಣ ಪ್ರಮಾಣದ ಪಂದ್ಯ ನಡೆಯಲ್ಲ. ಆಗ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದಾಗಿದೆ.