ವಿರಾಟ್ ಕೊಹ್ಲಿ ಮೇಲೆ ಅನಿಲ್ ಕುಂಬ್ಳೆ ಗರಂ: ದೇಶೀಯ ಕ್ರಿಕೆಟ್ ಆಡಲು ಹೋಗಲಿ ಎಂದ ದಿಗ್ಗಜ

Krishnaveni K

ಶುಕ್ರವಾರ, 25 ಅಕ್ಟೋಬರ್ 2024 (14:47 IST)
Photo Credit: X
ಪುಣೆ: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲೂ ಮತ್ತೊಮ್ಮೆ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸಿದ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಕೋಚ್, ಸ್ಪಿನ್ನರ್ ಅನಿಲ್ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 156 ರನ ಗಳಿಗೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಟಾಪ್ ಆರ್ಡರ್ ಬ್ಯಾಟಿಗರು ಹೀನಾಯ ಪ್ರದರ್ಶನ ನೀಡಿದ್ದರೆ. ರೋಹಿತ್ ಸೊನ್ನೆ ಸುತ್ತಿದರೆ ಕೊಹ್ಲಿ 1 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ಸ್ಪಿನ್ ಬೌಲಿಂಗ್ ನಲ್ಲಿ ಕೊಹ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿರುವ ಕೊಹ್ಲಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಮಾಜಿ ಕೋಚ್ ಅನಿಲ್ ಕುಂಬ್ಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮೊದಲು ದೇಶೀಯ ಕ್ರಿಕೆಟ್ ಆಡಬೇಕು ಎಂದಿದ್ದಾರೆ.

‘ಹೆಚ್ಚೇನೂ ಬೇಕಾಗಿಲ್ಲ, ಆದರೆ ಎರಡು ಅಥವಾ ಮೂರು ಇನಿಂಗ್ಸ್ ಗಳನ್ನು ಆಡಿದರೂ ಸಾಕಿತ್ತು. ನೆಟ್ ಪ್ರಾಕ್ಟೀಸ್ ಮಾಡುವುದಕ್ಕಿಂತಲೂ ನಿಜವಾದ ಪಂದ್ಯದಲ್ಲಿ ಆಡುವುದರ ಪರಿಣಾಮವೇ ಬೇರೆಯಿರುತ್ತದೆ.  ಇದಕ್ಕೆ ಮೊದಲು ಕೆಲವು ಪಂದ್ಯಗಳನ್ನು ಆಡಿದ್ದರೆ ಚೆನ್ನಾಗಿರುತ್ತಿತ್ತು. ಅದು ನಿಜಕ್ಕೂ ಸಹಾಯ ಮಾಡುತ್ತಿತ್ತು. ಆದರೆ ಕೊಹ್ಲಿಯ ಸ್ಪಿನ್ ಎದುರು ಪರದಾಟಕ್ಕೆ ಇದೊಂದೇ ಕಾರಣ ಎಂದೂ ಹೇಳಲಾಗದು’ ಎಂದು ಕುಂಬ್ಳೆ ಹೇಳಿದ್ದಾರೆ.

ಸ್ಪಿನ್ ಬೌಲಿಂಗ್ ಎದುರು ಇತ್ತೀಚೆಗೆ ವಿರಾಟ್ ಕೊಹ್ಲಿ ಕೆಟ್ಟ ದಾಖಲೆ ಹೊಂದಿದ್ದಾರೆ. 2021 ರಿಂದ ಏಷ್ಯಾ ಪಿಚ್ ಗಳಲ್ಲಿ ಕೊಹ್ಲಿ ಸ್ಪಿನ್ ಎದುರು 26 ಇನಿಂಗ್ಸ್ ಗಳಲ್ಲಿ ಗಳಿಸಿದ್ದು ಕೇವಲ 606 ರನ್. ಹೊಸ ಬೌಲರ್ ಗಳ ಮುಂದೆಯೂ ಕೊಹ್ಲಿ ಪರದಾಡುತ್ತಿರುವುರೂ ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ