ಚಾಂಪಿಯ‌ನ್ಸ್‌ ಟ್ರೋಫಿಗೂ ಮುನ್ನ ಕಾಂಗರೂ ಪಡೆಗೆ ಮತ್ತೊಂದು ಶಾಕ್‌: ಮಿಚೆಲ್ ಸ್ಟಾರ್ಕ್ ಔಟ್‌

Sampriya

ಬುಧವಾರ, 12 ಫೆಬ್ರವರಿ 2025 (14:46 IST)
Photo Courtesy X
ಆಸ್ಟ್ರೇಲಿಯಾ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಬಲಿಷ್ಠ ತಂಡಗಳನ್ನು ಕಟ್ಟಲು ಸಿದ್ಧತೆ ನಡೆಸುತ್ತಿವೆ. ಆದರೆ, ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್‌ರಂತಹ ಅನುಭವಿ ಆಟಗಾರರು ಗಾಯದ ಕಾರಣದಿಂದಾಗಿ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. ಮತ್ತೊಂದೆಡೆ ಆಲ್‌ರೌಂಡರ್‌ ಮಾರ್ಕಸ್ ಸ್ಟೊಯಿನಿಸ್ ದಿಢೀರ್‌ ನಿವೃತ್ತಿ ಘೋಷಿಸಿದ್ದರು. ಈಗ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಈ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಮೆಗಾ ಟೂರ್ನಿಯಿಂದ ತಮ್ಮ ಹೆಸರನ್ನು ಮಿಚೆಲ್ ಸ್ಟಾರ್ಕ್ ಹಿಂತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅನುಭವಿ ವೇಗಿಗಳಾದ ಕಮ್ಮಿನ್ಸ್, ಹ್ಯಾಜಲ್‌ವುಡ್ ಮತ್ತು ಸ್ಟಾರ್ಕ್ ತ್ರಿವಳಿ ವೇಗಿಗಳು ಚಾಂಪಿಯನ್‌ ಟ್ರೋಫಿಗೆ ಲಭ್ಯವಿಲ್ಲ. ಅವರ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಕಾಡಲಿದೆ.

ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ, ಆಸ್ಟ್ರೇಲಿಯಾ ಫೆಬ್ರವರಿ 22 ರಂದು ಇಂಗ್ಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ತಂಡವನ್ನು ಸ್ಟೀವ್‌ ಸ್ಮಿತ್‌ ಮುನ್ನಡೆಸಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ