ಬಾಕ್ಸಿಂಗ್‌ ಡೇ ಟೆಸ್ಟ್‌: ಮೊದಲ ದಿನ ಕಾಂಗರೂ ಪಡೆ ಮೇಲುಗೈ, ಭಾರತದ ಬೌಲರ್‌ಗಳು ಸುಸ್ತು

Sampriya

ಗುರುವಾರ, 26 ಡಿಸೆಂಬರ್ 2024 (14:17 IST)
Photo Courtesy X
ಮೆಲ್ಬರ್ನ್: ಇಲ್ಲಿ ಇಂದು ಆರಂಭಗೊಂಡ ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರು.

ಭಾರತ ಬೌಲರ್‌ಗಳ ಮೇಲೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಸವಾರಿ ಮಾಡಿದರು. ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್‌ ಪೇರಿಸಿದೆ.

ಪದಾರ್ಪಣೆ ಮಾಡಿದ 19 ವರ್ಷದ ಆರಂಭಿಕ ಆಟಗಾರ ಸಾಮ್ ಕೋನ್‌ಸ್ಟಾಸ್‌ ಹಾಗೂ ಉಸ್ಮಾನ್ ಖವಾಜ ಮೊದಲ ವಿಕೆಟ್‌ಗೆ 89 ರನ್ ಪೇರಿಸಿದರು. ವೇಗವಾಗಿ ಆಡಿದ ಕೋನ್‌ಸ್ಟಾಸ್‌ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.  

ಕೋನ್‌ಸ್ಟಾಸ್‌ 65 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಜಸ್ಪ್ರೀತ್ ಬೂಮ್ರಾ ಎಸೆತಕ್ಕೆ ರಿವರ್ಸ್ ಸ್ಕೂಪ್ ಮಾಡಿದ್ದು ಗಮನ ಸೆಳೆಯಿತು. 92 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ರವೀಂದ್ರ ಜಡೇಜ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಖ್ವಾಜಾ (57), ಲಾಬುಷೇನ್ (72), ಸ್ಟೀವನ್ ಸ್ಮಿನ್ (ಅಜೇಯ 68) ಅರ್ಧ ಶತಕ ಬಾರಿಸಿದರು. ಕಳೆದೆರಡು ಪಂದ್ಯದಲ್ಲಿ ಭಾರತಕ್ಕೆ ತಲೆನೋವಾಗಿದ್ದ ಟ್ರಾವಿಸ್ ಹೆಡ್‌ ಅವರನ್ನು ಬೂಮ್ರಾ ಶೂನ್ಯಕ್ಕೆ ಬೌಲ್ಡ್ ಮಾಡಿದರು. ಮಿಚೆಲ್ ಮಾರ್ಷ್ 4 ಮತ್ತು ಅಲೆಕ್ಸ್ ಕ್ಯಾರಿ 31 ರನ್ ಗಳಿಸಿದರು. ನಾಯಕ ಪಾಟ್ ಕಮಿನ್ಸ್ 8 ರನ್‌ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಬೂಮ್ರಾ 3, ವಾಷಿಂಗ್ಟನ್ ಸುಂದರ್, ಆಕಾಶ್‌ ದೀಪ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು. ಈ ಪಂದ್ಯದಲ್ಲಿ ಭಾರತ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಶುಭಮನ್ ಗಿಲ್ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ