ದುಬೈ: ಇಂದಿನಿಂದ ದುಬೈನಲ್ಲಿ ಏಷ್ಯಾ ಕಪ್ ಕ್ರಿಕೆಟ್ 2025 ಆರಂಭವಾಗಲಿದ್ದು, ಈ ಪಂದ್ಯಾವಳಿಯ ಲೈವ್ ಎಲ್ಲಿ ವೀಕ್ಷಿಸಬೇಕು, ಏಷ್ಯಾ ಕಪ್ ಇತಿಹಾಸವೇನು ಇಲ್ಲಿದೆ ಸಂಪೂರ್ಣ ವಿವರ.
ಈ ಬಾರಿ ಯುಎಇನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಕೊನೆಯ ಬಾರಿಗೆ 2023 ರಲ್ಲಿ ಏಷ್ಯಾ ಕಪ್ ನಡೆದಿತ್ತು. ಈ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡು ಈಗ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ. ಏಷ್ಯಾ ಕಪ್ ನ್ನು ಅತೀ ಹೆಚ್ಚು ಬಾರಿ ಗೆದ್ದ ತಂಡ ಭಾರತ. ಒಟ್ಟು 8 ಬಾರಿ ಭಾರತ ಗೆದ್ದರೆ, 6 ಬಾರಿ ಗೆದ್ದ ಶ್ರೀಲಂಕಾ ಎರಡನೆಯ ಸ್ಥಾನದಲ್ಲಿದೆ. ಇದು ಏಷ್ಯಾ ಕಪ್ ನ 17 ನೇ ಆವೃತ್ತಿಯಾಗಿದೆ.
ಇಂದಿನಿಂದ ಏಷ್ಯಾ ಕಪ್ ಪಂದ್ಯ ಆರಂಭವಾಗಲಿದೆ. ತಂಡಗಳನ್ನು ಒಟ್ಟು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಒಮನ್, ಪಾಕಿಸ್ತಾನ, ಯುಎಇ ತಂಡಗಳಿವೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಹಾಂಗ್ ಕಾಂಗ್, ಅಫ್ಘಾನಿಸ್ತಾನ ತಂಡಗಳಿವೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ಮುಖಾಮುಖಿಯಾಗಲಿದೆ. ಬಹುತೇಕ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್ ನಲ್ಲಿ ವೀಕ್ಷಿಸಬಹುದು. ಅಲ್ಲದೆ ಸೋನಿ ಲೈವ್ ಆಪ್ ನಲ್ಲೂ ನೇರಪ್ರಸಾರ ವೀಕ್ಷಿಸಬಹುದಾಗಿದೆ.