ಏಷ್ಯಾ ಕಪ್ ಕ್ರಿಕೆಟ್: ಪಾಕ್ ಬೌಲರ್ ಗಳಿಗೆ ಔಟ್ ಆಫ್ ಸಿಲಬಸ್ ಆಗಿ ಬಂದ ಪಾಂಡ್ಯ-ಜಡೇಜಾ
ಭಾನುವಾರ, 28 ಆಗಸ್ಟ್ 2022 (23:47 IST)
ದುಬೈ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನ ಅಪ್ಪಟ ರೋಚಕತೆ ಮರಳಿ ಬಂದಂತಾಗಿದೆ. ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.
ಪಾಕಿಸ್ತಾನ ಬೌಲರ್ ಗಳು ರೋಹಿತ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಎಂಬ ಟೀಂ ಇಂಡಿಯಾದ ಬಿಗ್ ಥ್ರೀ ಬ್ಯಾಟಿಗರಿಗೆ ತಯಾರಾಗಿ ಬಂದಿದ್ದರು. ಆದರೆ ರವೀಂದ್ರ ಜಡೇಜಾ-ಹಾರ್ದಿಕ್ ಪಾಂಡ್ಯ ಔಟ್ ಆಫ್ ಸಿಲಬಸ್ ಆಗಿ ಬಂದರು. ಒತ್ತಡದ ಸಂದರ್ಭವನ್ನು ಅದ್ಭುತವಾಗಿ ನಿಭಾಯಿಸಿದ ಜಡೇಜಾ-ಹಾರ್ದಿಕ್ ಜೋಡಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಮಾಡಿದ ಪ್ರಮಾದವನ್ನು ಸರಿಪಡಿಸಿತು.
ಪಾಕ್ ನೀಡಿದ 148 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಕೆಎಲ್ ರಾಹುಲ್ ಬಂದ ಬಾಲ್ ಗೇ ಔಟಾಗುವ ಮೂಲಕ ಆಘಾತ ನೀಡಿದರು. ಆದರೆ ನಂತರ ರೋಹಿತ್ ಶರ್ಮಾ-ಕೊಹ್ಲಿ ಆಟಕ್ಕೆ ಕುದುರಿಕೊಳ್ಳುತ್ತಿರುವಾಗಲೇ ರೋಹಿತ್ 12 ರನ್ ಗೆ ಔಟಾದರು. ಆದರೆ ಕೊಹ್ಲಿ 35 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅಚ್ಚರಿಯೆಂಬಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ರವೀಂದ್ರ ಜಡೇಜಾ 29 ಎಸೆತಗಳಲ್ಲಿ 35 ರನ್ ಗಳಿಸಿದರು. ದುರದೃಷ್ಟವಶಾತ್ ಕೊನೆಯ ಓವರ್ ನಲ್ಲಿ 6 ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಜಡೇಜಾ ಔಟಾದರು. ಆದರೆ ಬಳಿಕ ಹಾರ್ದಿಕ್ ಪಾಂಡ್ಯ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ರನ್ ಗಳಿಸಿಕೊಟ್ಟರು. ಹಾರ್ದಿಕ್ 17 ಎಸೆತಗಳಲ್ಲಿ 33 ರನ್ ಚಚ್ಚಿದ್ದು ನಿರ್ಣಾಯಕವಾಯಿತು. ಅಂತಿಮವಾಗಿ ಭಾರತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ವಿಜಯಿಯಾಯಿತು. ಭಾರತ ರೋಚಕವಾಗಿ 5 ವಿಕೆಟ್ ಗಳ ಗೆಲುವು ಕಾಣುತ್ತಿದ್ದಂತೇ ಸ್ಟೇಡಿಯಂ ಹುಚ್ಚೆದ್ದು ಕುಣಿಯಿತು.