ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಗುಂಪು ಹಂತದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ, ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡವು ಇಂದು ಮತ್ತೆ ಸೂಪರ್ ಫೋರ್ ಹಂತದಲ್ಲಿ ಪಾಕ್ ತಂಡವನ್ನು ಎದುರಿಸಲಿದೆ.
ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಸೂರ್ಯಕುಮಾರ್ ಯಾದವ್ ಪಡೆ ಸೂಪರ್-4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮತ್ತೊಮ್ಮೆ ಮುಖಾಮುಖಿಯಾಗಲಿದೆ.
ಸೆ.14ರಂದು ಈ ಎರಡು ತಂಡಗಳು ದುಬೈನಲ್ಲಿ ಗ್ರೂಪ್ ಹಂತದ ಪಂದ್ಯವನ್ನು ಆಡಿದ್ದು, ಆ ಪಂದ್ಯವನ್ನು ಭಾರತವು ಸುಲಭವಾಗಿ ಗೆದ್ದುಕೊಂಡಿತ್ತು.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಸೂಪರ್-4 ಹಂತ ತಲುಪಿವೆ. ಮುಂದಿನ 6 ದಿನಗಳ ಕಾಲ ಈ ತಂಡಗಳು ಪರಸ್ಪರ ಒಂದು ಬಾರಿ ಸೆಣಸಾಡಲಿವೆ. ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆ.28ರಂದು ಭಾನುವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಭಾರತ ತಂಡವು ಒಮಾನ್ ವಿರುದ್ಧ ಶುಕ್ರವಾರ ಆಡಿದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪರದಾಟ ನಡೆಸಿದರೂ 21 ರನ್ ಅಂತರದಿಂದ ಜಯ ಸಾಧಿಸಿದೆ. ಒಮಾನ್ ವಿರುದ್ದ ಪಂದ್ಯದಲ್ಲಿ ಭಾರತವು ಸಾಕಷ್ಟು ಪ್ರಯೋಗ ನಡೆಸಿದ್ದು, ನಾಯಕ ಸೂರ್ಯಕುಮಾರ್ 8ನೇ ವಿಕೆಟ್ ಪತನಗೊಂಡರೂ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಸೂರ್ಯಕುಮಾರ್ ಭಾರತ ತಂಡವನ್ನು ದಿಟ್ಟವಾಗಿ ಮುನ್ನಡೆಸುತ್ತಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾರತ ವಿರುದ್ದ ಪಂದ್ಯದ ವೇಳೆ ಹ್ಯಾಂಡ್‌ಶೇಕ್ ವಿವಾದ ಉಂಟಾದ ನಂತರ ಪಾಕಿಸ್ತಾನ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವ ಬೆದರಿಕೆ ಹಾಕಿತ್ತು. ಯುಎಇ ವಿರುದ್ಧ ಪಂದ್ಯದಲ್ಲಿ ಸಮಯಕ್ಕೆ ಸರಿಯಾಗಿ ಮೈದಾನಕ್ಕೆ ಆಗಮಿಸದೆ ಹೊಟೇಲ್ ರೂಮ್‌ನಲ್ಲಿ ಉಳಿದುಕೊಂಡಿತ್ತು. ಆ ಪಂದ್ಯವು 1 ಗಂಟೆ ತಡವಾಗಿ ಆರಂಭವಾಗಿತ್ತು.
ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯದಲ್ಲಿ ಮತ್ತಷ್ಟು ಡ್ರಾಮಾ ನಡೆಯುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಪಂದ್ಯ ಮುಗಿದ ನಂತರ ಪಾಕಿಸ್ತಾನಿ ಆಟಗಾರರ ಕೈ ಕುಲುಕಲು ನಿರಾಕರಿಸಿದ್ದರು. ಇದೀಗ ಪಾಕಿಸ್ತಾನ ತಂಡ ಭಾರತಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.