ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಗೆದ್ದರೂ ಟ್ರೋಫಿ ಮಾತ್ರ ಭಾರತಕ್ಕೆ ಸಿಕ್ಕಿಲ್ಲ. ಏಷ್ಯನ್ ಕ್ರಿಕೆಟ್ ಸಮಿತಿ ಮುಖ್ಯಸ್ಥರೂ ಆಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಭಾರತ ನಿರಾಕರಿಸಿತ್ತು. ಈ ಕಾರಣಕ್ಕೆ ನಖ್ವಿ ಟ್ರೋಫಿ ಸಮೇತ ಮೈದಾನದಿಂದ ಪರಾರಿಯಾಗಿದ್ದಾರೆ. ಇದಕ್ಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಏಷ್ಯಾ ಕಪ್ ನಲ್ಲಿ ನಿನ್ನೆ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ದಾಖಲೆಯ 9 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಯಿತು. ಆದರೆ ಪ್ರಶಸ್ತಿ ಸಮಾರಂಭದಲ್ಲಿ ಟೀಂ ಇಂಡಿಯಾ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಹೀಗಾಗಿ ಪ್ರಶಸ್ತಿ ಸಮಾರಂಭ ತಡವಾಗಿ ಆರಂಭವಾಯಿತು. ಕೊನೆಗೆ ಭಾರತೀಯ ಆಟಗಾರರಿಗೆ ಇತರರು ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಪ್ರಧಾನ ಮಾಡಿದರು. ಆದರೆ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಆಟಗಾರರು ನಿರಾಕರಿಸಿದರು.
ಅವಮಾನಿತರಾದ ನಖ್ವಿ ಮೈದಾನದಿಂದ ಹೊರಗೆ ಹೋಗುವಾಗ ಟ್ರೋಫಿಯನ್ನೂ ಹೊತ್ತೊಯ್ದಿದ್ದಾರೆ. ಆದರೂ ಟೀಂ ಇಂಡಿಯಾ ಸಂಭ್ರಮಾಚರಣೆಗೇನೂ ಕೊರತೆಯಾಗಲಿಲ್ಲ. ಟ್ರೋಫಿ ಇದ್ದಂತೆ ಭಾವಿಸಿಕೊಂಡು ಟೀಂ ಇಂಡಿಯಾ ಆಟಗಾರರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್ ಯಾದವ್, ಇಂತಹದ್ದೊಂದು ಘಟನೆ ನಾನೆಲ್ಲೂ ಕಂಡು, ಕೇಳಿಲ್ಲ. ಫೈನಲ್ ಗೆದ್ದ ತಂಡಕ್ಕೆ ಟ್ರೋಫಿಯೇ ಕೊಡದಿರುವುದು ವಿಚಿತ್ರ. ಆದರೂ ನಮ್ಮಬಳಿ ಡ್ರೆಸ್ಸಿಂಗ್ ರೂಂನಲ್ಲಿ 14 ಟ್ರೋಫಿಗಳಿವೆ. ಅವರೆಲ್ಲರೂ ನಮ್ಮ ಆಟಗಾರರು. ಅವರೇ ನನ್ನ ಪಾಲಿಗೆ ನಿಜವಾದ ಟ್ರೋಫಿ ಎಂದಿದ್ದಾರೆ.