ಇಂಗ್ಲೆಂಡ್-ಭಾರತ ಸರಣಿಗೆ ಅಡ್ಡಗಾಲು ಹಾಕಲು ಬಿಸಿಸಿಐ ಅತೃಪ್ತರ ತೆರೆಮರೆಯ ಪ್ರಯತ್ನ

ಶನಿವಾರ, 7 ಜನವರಿ 2017 (12:41 IST)
ಮುಂಬೈ: ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಬಿಸಿಸಿಐನ ದೊಡ್ಡ ತಲೆಗಳು ಉರುಳಿವೆ. ಇದೀಗ ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿರುವ ಕೆಲವು ಅಧಿಕಾರಿಗಳು ಇಂಗ್ಲೆಂಡ್ ಮತ್ತು ಭಾರತ ಏಕದಿನ ಸರಣಿಗೆ ಹಲವು ರೀತಿಯಲ್ಲಿ ಅಡ್ಡಿ ಪಡಿಸಲು ತೆರೆಮರೆಯ ಪ್ರಯತ್ನ ನಡೆಸುತ್ತಿವೆ.

ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ತಾವು ಸಂಪೂರ್ಣವಾಗಿ ಬಿಸಿಸಿಐ ಹಿಡಿತದಲ್ಲಿರದೆ, ಸ್ವಾವಲಂಬಿಗಳು ಎಂದು ನಂಬಿಕೊಂಡಿದ್ದಾರೆ. ಇಂತಹ ಸಂಸ್ಥೆಗಳು ಪಂದ್ಯ ನಡೆಯುವ ಮೈದಾನದಲ್ಲಿರುವ ಸೌಕರ್ಯಗಳು ತಮಗೆ ಸೇರಿದ್ದು, ಇದನ್ನು ಪಂದ್ಯಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಅಡ್ಡಗಾಲು ಹಾಕಲು ಸಂಚು ರೂಪಿಸಿದೆ ಎನ್ನಲಾಗಿದೆ.

ಇದಕ್ಕಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಅತೃಪ್ತರ ವೇದಿಕೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತಯಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುವ ಹೆಚ್ಚಿನ ಮೈದಾನಗಳು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಡಳಿತಕ್ಕೊಳಪಟ್ಟಿದೆ. ಹೀಗಾಗಿ ಪಂದ್ಯ ನಡೆಸಲು ಅನುಮತಿ ಕೊಡದೇ ಬಿಸಿಸಿಐಯನ್ನು ಸತಾಯಿಸುವ ಲೆಕ್ಕಾಚಾರ ಹೊಂದಿದೆ ಎನ್ನಲಾಗಿದೆ.

ಇದೆಲ್ಲಾ ಆದರೆ ಭಾರತ ಕ್ರಿಕೆಟ್ ನಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯಲಿವೆ. ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಧಿಕಾರಿಗಳು ತಮ್ಮದೇ ಗುಂಪು ಕಟ್ಟಿಕೊಂಡು ಬಿಸಿಸಿಐನಿಂದ ಪ್ರತ್ಯೇಕವಿರಲು ತೀರ್ಮಾನಿಸಿದರೆ, ಭಾರತದಲ್ಲಿ ಕ್ರಿಕೆಟ್ ಗೆ ಸಂಚಕಾರ ಕಟ್ಟಿಟ್ಟ ಬುತ್ತಿ. ಹೀಗಾಗಿ ಮತ್ತೊಮ್ಮೆ ಭಾರತ ಇಂಗ್ಲೆಂಡ್ ಸರಣಿಗೆ ಸಂಕಷ್ಟ ಕಾದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ