ಓಲ್ಡ್ ಟ್ರಾಫರ್ಡ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವೇಗಿ ಅಂಶುಲ್ ಕಾಂಬೋಜ್ ರನ್ನು ಕಣಕ್ಕಿಳಿಸಿದೆ. ಅಷ್ಟಕ್ಕೂ ಈ ಯುವ ಬೌಲರ್ ನ ಹಿನ್ನಲೆಯೇನು ಗೊತ್ತಾ?
ಅಂಶುಲ್ ಕಾಂಬೋಜ್ ಮೂಲತಃ ಹರ್ಯಾಣದವರು. 24 ವರ್ಷದ ವೇಗಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ. ಇದೀಗ ಆಕಾಶ್ ದೀಪ್, ಅರ್ಷ್ ದೀಪ್ ಸಿಂಗ್ ಗಾಯಗೊಂಡ ಹಿನ್ನಲೆಯಲ್ಲಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿತ್ತು.
ಮಧ್ಯಮ ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡಾ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬೌಲಿಂಗ್ ಆಕ್ಷನ್ ಥೇಟ್ ಮೊಹಮ್ಮದ್ ಶಮಿಯನ್ನೇ ಹೋಲುತ್ತದೆ. ಕಳೆದ ತಿಂಗಳು ಇಂಡಿಯಾ ಎ ಪರ ಮೂರು ದಿನಗಳ ಪಂದ್ಯದಲ್ಲಿ ಆಡಿ ಎರಡು ಪಂದ್ಯಗಳಿಂದ ಐದು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲೂ 10 ಪಂದ್ಯಗಳಿಂದ 17 ವಿಕೆಟ್ ಉರುಳಿಸಿದ್ದರು.
ಈ ಮೊದಲು 2023 ರಲ್ಲಿ ಅಂಶುಲ್ ಆರ್ ಸಿಬಿ ಕ್ಯಾಂಪ್ ನಲ್ಲಿದ್ದರು. ಮರು ವರ್ಷ ಅವರನ್ನು ಬೇಸ್ ಪ್ರೈಸ್ ಗೆ ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿತ್ತು. ಆದರೆ ಕಳೆದ ಸೀಸನ್ ನಲ್ಲಿ ಸಿಎಸ್ ಕೆ ಪರ ಆಡಿ ಗಮನ ಸೆಳೆದಿದ್ದರು. ಇದೀಗ ಟೀಂ ಇಂಡಿಯಾ ಪರ ಆಡುತ್ತಿದ್ದು ಅವರ ಮೇಲೆ ಅಪಾರ ನಿರೀಕ್ಷೆಯಿದೆ.