ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದ ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ಟೀಕೆ

ಬುಧವಾರ, 4 ಮೇ 2016 (16:28 IST)
ಬಿಸಿಸಿಐ ಕಾರ್ಯನಿರ್ವಹಣೆ ಕುರಿತು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮಂಡಳಿಯ ಸಂವಿಧಾನವು ಪಾರದರ್ಶಕತೆ, ಉತ್ತರದಾಯಿತ್ವದ ಮೌಲ್ಯಗಳನ್ನು ಸಾಧಿಸಲು ಅಸಮರ್ಥವಾಗಿದೆ ಎಂದು ಟೀಕಿಸಿದ್ದು, ಮಂಡಳಿಯ ಸಂವಿಧಾನವನ್ನು ಬದಲಾಯಿಸುವ ಮೂಲಕ ಮಾತ್ರ ಈ ಗುರಿಗಳನ್ನು  ಸಾಧಿಸಲು ಸಾಧ್ಯ ಎಂದು ಹೇಳಿದೆ.
 
ಬಿಸಿಸಿಐನ ಅಂತರ್ಗತ ಸಂವಿಧಾನದ ರಚನೆಯನ್ನು ಬದಲಿಸದೇ ಈ ಮೌಲ್ಯಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು  ಮುಖ್ಯನ್ಯಾಯಮೂರ್ತಿ ಟಿ.ಎಸ್. ಠಾಕುರ್ ಮತ್ತು ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲಾ ಅವರ ಪೀಠವು ತಿಳಿಸಿದೆ. ಲೋಧಾ ಸಮಿತಿ ಸಲಹೆ ಮಾಡಿದ ಸುಧಾರಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಾ ಪೀಠವು ಮೇಲಿನ ಅಭಿಪ್ರಾಯವನ್ನು ತಾಳಿದೆ.

ಕೋರ್ಟ್‌ಗೆ ಅಮಿಕಸ್ ಕ್ಯೂರಿಯಾಗಿ ನೇಮಕವಾಗಿದ್ದ ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂ, ಬಿಸಿಸಿಐ ಸಂವಿಧಾನವು ಮೌಲ್ಯಗಳ ಸಾಧನೆಗೆ ಅವಕಾಶ ನೀಡದಿದ್ದರೆ, ಅದು ಅಕ್ರಮವಾಗುತ್ತದೆ. ಏಕೆಂದರೆ ಕ್ರಿಕೆಟ್ ಮಂಡಳಿಯು ಸಾರ್ವಜನಿಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ನೀವು ಸಾರ್ವಜನಿಕ ಕಾರ್ಯವನ್ನು ನಿರ್ವಹಿಸುತ್ತೀರಿ, ಆದರೆ ಖಾಸಗಿ ಸ್ಥಾನಮಾನ ಬಯಸುತ್ತೀರಿ ಎಂದು ಸುಬ್ರಮಣಿಯಂ ಟೀಕಿಸಿದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ